ಓ ಮೆಣಸೇ...

Update: 2022-01-16 18:31 GMT

 ನಳಿನ್ ಕುಮಾರ್ ಕಟೀಲು ಅವರ ಎಳಸುತನದ ಪ್ರಾಯದ ಬಗ್ಗೆ ನನಗೆ ಹೆಮ್ಮೆಯಿದೆ-ಕೋಟ ಶ್ರೀನಿವಾಸ ಪೂಜಾರಿ, ಸಚಿವ
 ಅಷ್ಟು ವಯಸ್ಸಾದರೂ ಇನ್ನೂ ಅವರು ಬೆಳೆದಿಲ್ಲ ಎಂಬ ಹೆಮ್ಮೆಯೇ?


ಜಾಗತಿಕ ವಿದ್ಯಮಾನಗಳಿಗೆ ನಿರ್ಣಾಯಕ ಪಾತ್ರ ವಹಿಸುವ ಶಕ್ತಿ ಮತ್ತು ಸಾಮರ್ಥ್ಯ ಭಾರತಕ್ಕಿದೆ-ರಾಮ್‌ಮಾಧವ್, ಆರೆಸ್ಸೆಸ್ ನಾಯಕ
ಆಂತರಿಕ ವಿದ್ಯಮಾನಗಳಲ್ಲಿ ಹೀನಾಯವಾಗಿ ಸೋತ ಬಳಿಕ ನೆಮ್ಮದಿ ಪಟ್ಟುಕೊಳ್ಳುವುದಕ್ಕೆ ಉಳಿದಿರುವುದು ಇಂತಹ ಭ್ರಮೆಗಳು ಮಾತ್ರ.

ನಾನು ತಿಹಾರ್ ಜೈಲಿನಲ್ಲಿ ಗಡ್ಡ ಬಿಟ್ಟಿದ್ದೇನೆ. ಈ ಗಡ್ಡ ತೆಗೆಯಬೇಕಾದರೆ ಜನರೇ ಮುಕ್ತಿ ಕೊಡಿಸಬೇಕು -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಜನರು ಮುಖ ನೋಡಲಿಕ್ಕೂ ನಿರಾಕರಿಸಿಬಿಟ್ಟರೆ?

ತಮಿಳುನಾಡಿನಲ್ಲಿ ಮಗುವನ್ನು ಚಿವುಟಿ ಕರ್ನಾಟಕದಲ್ಲಿ ತೊಟ್ಟಿಲು ತೂಗುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ -ನಳಿನ್ ಕುಮಾರ್ ಕಟೀಲು, ಸಂಸದ
ನಿಮ್ಮ ಪಕ್ಷದಂತೆ ಅಲ್ಲೂ ಇಲ್ಲೂ ಚಿವುಟುತ್ತಲೇ ಇರಬೇಕು, ಅಂತೀರಾ?

ಸೇನೆ ಸೇರಿ ರಾಷ್ಟ್ರ ಸೇವೆ ಮಾಡುವ ಹೆಣ್ಣು ಮಕ್ಕಳ ಕನಸು ನನಸಾಗುವ ದಿನಗಳು ದೂರವಿಲ್ಲ -ರಾಜನಾಥ್ ಸಿಂಗ್, ಕೇಂದ್ರ ಸಚಿವ
ಪಕ್ಷ ಸೇರಿ ರಾಷ್ಟ್ರ ಸೇವೆ ಮಾಡುವ ಕಾಲ ಮುಗಿಯಿತೇ?

ಮೇಕೆದಾಟು ಪಾದಯಾತ್ರೆ ಕುರಿತು ಟೀಕಿಸಲು ನನಗೆ ನೈತಿಕತೆಯಿಲ್ಲ -ರೇಣುಕಾಚಾರ್ಯ, ಶಾಸಕ
ಫುಡಾರಿ ಅಂದಮೇಲೆ ಯಾವ ವಿಷಯದಲ್ಲೂ ಜನರು ನೈತಿಕತೆಯನ್ನು ನಿರೀಕ್ಷಿಸುವುದಿಲ್ಲ, ಬಿಡಿ.

ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು -ಪುಷ್ಕರ್ ಸಿಂಗ್ ಧಾಮಿ, ಉತ್ತರಾಖಂಡ ಸಿಎಂ
ಕಾಂಗ್ರೆಸ್ ಮತ್ತು ಬಿಜೆಪಿ ಎಂದರೂ ನಡೆಯುತ್ತಿತ್ತು.

ಉ.ಪ್ರ. ಚುನಾವಣಾ ಫಲಿತಾಂಶವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಅಚ್ಚರಿ ಮೂಡಿಸಲಿದೆ-ಕಮಲ್‌ನಾಥ್, ಕಾಂಗ್ರೆಸ್ ಮುಖಂಡ
ಕಾಂಗ್ರೆಸ್ ಎಲ್ಲಿದೆ ಎಂಬ ಹುಡುಕಾಟ ಆರಂಭವಾದೀತೇ?

ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಮೂರ್ಖತನದ ಪರಮಾವಧಿ -ಬಿ.ಸಿ.ಪಾಟೀಲ್, ಸಚಿವ
ಅದನ್ನು ಹತ್ತಿಕ್ಕಲು ನೀವು ಕೈಗೊಂಡ ಕ್ರಮಗಳು ಉದ್ಧಟತನದ ಪರಮಾವಧಿ.

ಜನಪ್ರತಿನಿಧಿಯಾದವರು ಸದಾ ಕಾಲ ಜನರ ನಡುವೆ ಒಡನಾಟ, ಜನರ ಸೇವೆ ಮಾಡಿದಾಗ ಮಾತ್ರ ಅವರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯ -ವಿ.ಸೋಮಣ್ಣ, ಸಚಿವ
ವಿಶ್ವಾಸ ಗಳಿಸಿದ ಬಳಿಕ ದ್ರೋಹವೆಸಗಬಾರದು ಎಂದು ಕೂಡಾ ಉಪದೇಶಿಸಿ.

ಪಡಿತರದಲ್ಲಿ ಕುಚಲಕ್ಕಿ ವಿತರಣೆಗೆ ಕೇಂದ್ರ ಸರಕಾರ ಅನುಮತಿ ನೀಡುವ ಮೂಲಕ ಕರಾವಳಿ ಜನತೆಯ ಬೇಡಿಕೆಗೆ ಧನಾತ್ಮಕವಾಗಿ ಸ್ಪಂದಿಸಿದೆ-ಎಸ್.ಅಂಗಾರ, ಸಚಿವ
ಅನುಮತಿ ನೀಡಿದರೆ ಸಾಕೆ, ವಿತರಣೆಗೆ ಅಕ್ಕಿಯನ್ನೂ ಒದಗಿಸಬೇಡವೇ?

ಪಂಜಾಬ್ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ರಾಜ್ಯದ ಜನ ನಿರ್ಧರಿಸುತ್ತಾರೆಯೇ ಹೊರತು ಪಕ್ಷದ ಹೈಕಮಾಂಡ್ ಅಲ್ಲ-ನವಜೋತ್ ಸಿಂಗ್ ಸಿಧು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ
ಜನತೆಯ ಮೇಲೆ ಅಷ್ಟೊಂದು ವಿಶ್ವಾಸ ಉಳ್ಳವರು ಯಾವುದೇ ಪಕ್ಷದ ಹಂಗಿನಲ್ಲಿರಬಾರದು.

ಉ.ಪ್ರ.ದ ಈ ಬಾರಿಯ ಚುನಾವಣೆಯು ಶೇ.80ರ ವಿರುದ್ಧ ಶೇ.20ರ ಹೋರಾಟ-ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
ನಿಮಗೆ ಶೇ.20 ಸಿಕ್ಕರೆ ಮಹಾಭಾಗ್ಯ ಎನ್ನುತ್ತಿದ್ದಾರಲ್ಲ, ಜನರು?

ಬಿಜೆಪಿ ಶಾಸಕರು ಕೋವಿಡ್ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು-ಈಶ್ವರಪ್ಪ, ಸಚಿವ
ಕಾನೂನು ಉಲ್ಲಂಘಿಸುವವರಿಗೆ ಕೋವಿಡ್ ಲೆಕ್ಕವೇ?

ನಾವು ಬಿಜೆಪಿಯವರು ಗಂಡಸರು, ನಮ್ಮ ಗಂಡಸುತನವನ್ನು ಕೆಲಸದ ಮೂಲಕ ತೋರಿಸುತ್ತೇವೆ-ಡಾ.ಅಶ್ವತ್ಥ ನಾರಾಯಣ, ಸಚಿವ
ಹೀಗೆಲ್ಲಾ ಹೇಳಿ ಪಕ್ಷದಲ್ಲಿರುವ ಮಹಿಳೆಯರನ್ನು ಬೇಸ್ತು ಬೀಳಿಸಬೇಡಿ.

ಹೋರಿ ಬೆದರಿಸುವ ಜಾತ್ರೆಯಲ್ಲಿ ಕೋವಿಡ್ ಹರಡಿಲ್ಲ ಎಂದು ನಾನು ಲಿಖಿತವಾಗಿ ಬರೆದು ಕೊಡುತ್ತೇನೆ -ರೇಣುಕಾಚಾರ್ಯ, ಸಚಿವ
ಅದು ಕೋವಿಡ್ ಬೆದರಿಸುವ ಜಾತ್ರೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಕೊರೋನ ಮೊದಲನೇ ಅಲೆಗೆ ತಬ್ಲೀಗಿಗಳು ಕಾರಣ, ಮೂರನೇ ಅಲೆಗೆ ಕಾಂಗ್ರೆಸಿಗರು ಕಾರಣ -ಸುನೀಲ್ ಕುಮಾರ್, ಸಚಿವ
ತಬ್ಲೀಗಿಗಳ ನಮಸ್ತೆ ಟ್ರಂಪ್ ಸಮಾವೇಶ ಕಾರಣವಿರಬಹುದು.

ಮಹಿಳೆಯರ ವಿವಾಹದ ವಯಸ್ಸು ಏರಿಕೆ ಮಾಡಿರುವುದು ಅವರನ್ನು ‘ಆತ್ಮನಿರ್ಭರ’ರನ್ನಾಗಿ ಮಾಡಲಿದೆ-ನರೇಂದ್ರ ಮೋದಿ, ಪ್ರಧಾನಿ
ವಿವಾಹವಾಗಿ ಪತ್ನಿ ಪರಿತ್ಯಾಗ ಮಾಡಿದರೆ ಏನೆಲ್ಲಾ ಲಾಭಗಳಾಗುತ್ತವೆ ಎಂಬುದನ್ನೂ ವಿವರಿಸಿ.

ಒಂದು ವೇಳೆ ಚೀನಾ ಜೊತೆ ಯುದ್ಧ ನಡೆದರೆ ಗೆಲ್ಲುವುದು ನಾವೇ-ಎಂ.ಎಂ.ನರವಣೆ, ಭೂ ಸೇನಾ ಮುಖ್ಯಸ್ಥ
ಹಾಗಾದರೆ ವಿಳಂಬವೇಕೆ?

ಯುವಕರು ವಿವೇಕಾನಂದರ ಚಿಂತನೆಗಳಿಂದ ಸ್ಫೂರ್ತಿ ಪಡೆಯಬೇಕು-ರಘುಪತಿ ಭಟ್, ಶಾಸಕ
ಬಿಜೆಪಿಯೊಳಗಿರುವ ಅವಿವೇಕಾನಂದರುಗಳು ಅವಕಾಶ ಕೊಡಬೇಕಲ್ಲ.

ಸಾವರ್ಕರ್ ಬ್ರಿಟಿಷರಿಗೆ ಬರೆದ ಪತ್ರ ಕ್ಷಮಾಪಣೆಯದ್ದಲ್ಲ, ಅದು ಸಂಧಾನ ಪತ್ರ-ಸಾತ್ಯಕಿ ಸಾವರ್ಕರ್, ಸಾವರ್ಕರ್ ಮೊಮ್ಮಗ
ಬ್ರಿಟಿಷರು ಮಾಡಿದ್ದು ದಬ್ಬಾಳಿಕೆ ಅಲ್ಲ, ದಕ್ಷ ಆಡಳಿತ ಎಂದು ಕೂಡಾ ಹೇಳಿ ಬಿಡಿ.

ರಾಜ್ಯದ 25 ಸಂಸದರು ರಾಜ್ಯದ ಯಾವ ಸಮಸ್ಯೆಯ ಬಗ್ಗೆಯೂ ಧ್ವನಿ ಎತ್ತದೇ ಇರುವುದು ವಿಷಾದದ ಸಂಗತಿ -ಮನು ಬಳಿಗಾರ್, ಕಸಾಪ ನಿಕಟಪೂರ್ವ ಅಧ್ಯಕ್ಷ
ಸದ್ಯಕ್ಕೆ ಆ ಸಂಸದರೇ ರಾಜ್ಯದ ದೊಡ್ಡ ಸಮಸ್ಯೆ

ಆರೆಸ್ಸೆಸ್ ಎಂದರೆ ಇಡೀ ಹಿಂದೂ ಸಮಾಜ-ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಹಾಗಾದರೆ ಅದಕ್ಕೆ ಆರೆಸ್ಸೆಸ್ ಎಂಬೊಂದು ಪ್ರತ್ಯೇಕ ಹೆಸರಿನ ಕಳಂಕದ ಅಗತ್ಯವೇನಿದೆ?

ವಿಧಾನ ಪರಿಷತ್‌ನ ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು=-ಬಸವರಾಜ ಹೊರಟ್ಟಿ, ಸಭಾಪತಿ
ಅಂದರೆ ಸೂಟ್ಕೇಸ್ ಇನ್ನಷ್ಟು ಹಿರಿದಾಗಲಿದೆಯೇ ?

ನಮ್ಮ ಪೂರ್ವಜರು ತೆಂಗಿನ ಮರ ನೆಟ್ಟಿದ್ದರು, ಇದೀಗ ಬೇರೆಯವರು ಎಳನೀರು ಕುಡಿಯುತ್ತಿದ್ದಾರೆ-ಎಂ.ಪಿ.ರೇಣುಕಾಚಾರ್ಯ, ಶಾಸಕ
ನಿಮ್ಮ ವರ್ತನೆ ನೋಡಿದರೆ ಅದು ತಾಳೆ ಮರವೇ ಇರಬೇಕು.

ಯಾರೂ ಯಾರನ್ನು ಮುಗಿಸಲು ಸಾಧ್ಯವಿಲ್ಲ, ಅದು ದೇವರ ಆಟ-ದೇವೇಗೌಡ, ಮಾಜಿ ಪ್ರಧಾನಿ
ಸೋತಾಗ ದೇವರ ಆಶ್ರಯ ಹುಡುಕುವವರು ಗೆದ್ದಾಗ ಸ್ವತಃ ದೇವರಾಗಿ ಬಿಡುತ್ತಾರೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...