ಯೋಗೇಶ್‍ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೋರ್ಟ್ ನಿಂದ ಜಾಮೀನು ಷರತ್ತು ಸಡಿಲಿಕೆ

Update: 2022-01-17 13:16 GMT

ಬೆಂಗಳೂರು, ಜ.17: ಧಾರವಾಡ ಜಿಪಂ ಸದಸ್ಯ ಯೋಗೇಶ್‍ಗೌಡ ಹತ್ಯೆ ಪ್ರಕರಣದ ಆರೋಪಿ ಎನ್ನಲಾದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನು ಷರತ್ತನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಡಿಲಗೊಳಿಸಿ ಆದೇಶಿಸಿದೆ. 

ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿಚಾರಣಾ ಕೋರ್ಟ್ ವ್ಯಾಪ್ತಿಯಿಂದ ಹೊರ ಹೋಗಲು ಅನುಮತಿ ನೀಡಿದೆ. ಕೊಲೆ ಪ್ರಕರಣದಲ್ಲಿ ಸಿಬಿಐ ವಿನಯ್‍ರನ್ನು ಬಂಧಿಸಿತ್ತು. 2021ರ ಆ.11ರಂದು ಜಾಮೀನು ಮಂಜೂರು ಮಾಡಿದ್ದ ಸುಪ್ರೀಂಕೋರ್ಟ್, ಷರತ್ತುಗಳನ್ನು ವಿಧಿಸಿ, ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಆ.13ರಂದು ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ್ದ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಆರೋಪಿಯು ಈ ಕೋರ್ಟ್ ಅನುಮತಿ ಪಡೆಯದೇ ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೊರ ಹೋಗುವಂತಿಲ್ಲ ಎಂಬ ಷರತ್ತು ವಿಧಿಸಿತ್ತು.

ಧಾರವಾಡದಲ್ಲಿರುವ ಡೇರಿ ವ್ಯವಹಾರದ ಕಾರಣ ನೀಡಿ ನ.30ರಿಂದ ಡಿ. 30ರವರೆಗೂ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರ ಹೋಗಲು ವಿನಯ್ ಅನುಮತಿ ಪಡೆದಿದ್ದರು. ಬಳಿಕ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅವರು, ಈ ಷರತ್ತನ್ನೇ ಕೈಬಿಡುವಂತೆ ಕೋರಿದ್ದರು.

ಸಿಬಿಐ ಪರ ವಕೀಲರು, ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆರೋಪಿಯು ಈ ಮೊದಲು ವಿನಾಯಿತಿ ಪಡೆದು ಧಾರವಾಡ ಜಿಲ್ಲೆಯ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಪೀಠಕ್ಕೆ ತಿಳಿಸಿದ್ದರು. 

ವಕೀಲರ ವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ನ್ಯಾಯಾಲಯದ ಅನುಮತಿ ಇಲ್ಲದೇ ಹೊರ ಹೋಗುವಂತಿಲ್ಲ ಎಂಬ ಷರತ್ತನ್ನು ಮಾರ್ಪಾಡು ಮಾಡಿದ್ದಾರೆ. ಆರೋಪಿಯು ಸಿಬಿಐ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬಹುದು ಎಂಬ ಆದೇಶ ಹೊರಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News