ಕೋವಿಡ್ ನಿಯಮ: ಶಾಲೆಗಳನ್ನು ತೆರೆಯಲು ಕ್ರಮ ವಹಿಸಿ; ರೂಪ್ಸಾ ಮನವಿ

Update: 2022-01-17 13:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.17: ರಾಜ್ಯದಲ್ಲಿ ಕೊರೋನ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಸರಕಾರದ ಈ ನಡೆಯಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ನಾಶವಾಗಲಿದೆ. ಹಾಗಾಗಿ ಶಾಲೆಗಳನ್ನು ತೆರೆಯುವಂತೆ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ ಮನವಿ ಮಾಡಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ಹೆಚ್ಚುತ್ತಿರುವುದರಿಂದ ಶಾಲೆಗಳನ್ನು ಮುಚ್ಚುವ ಹಾಗೂ ತೆರೆಯುವ ವಿವೇಚನೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಹಳ್ಳಿ, ಪಟ್ಟಣಗಳಲ್ಲಿ ಪರಿಸ್ಥಿತಿಯನ್ನು ಗಮನಿಸದೇ, ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಹಳ್ಳಿಯ ಶಾಲೆಗಳನ್ನೂ ಮುಚ್ಚುವಂತೆ ಆದೇಶಿಸುತ್ತಿದ್ದಾರೆ. ಈ ಅವೈಜ್ಞಾನಿಕ ಪದ್ಧತಿಯಿಂದ ಶಾಲಾ ಮಕ್ಕಳ ಭವಿಷ್ಯ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದರು. 
 
ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದನ್ನು ಸರಕಾರವು ಗಮನದಲ್ಲಿರಿಸಿ ಸೂಕ್ತ ಕ್ರಮವನ್ನು ವಹಿಸಬೇಕು. ಮುಂದಿನ ವರ್ಷದ ಅಂತಿಮ ಪರೀಕ್ಷೆಗಳು ಸಮೀಪಿಸುತ್ತಿದ್ದು, ಅಲ್ಲಿಯವರೆಗೂ ಕನಿಷ್ಠ 5ನೇ ತರಗತಿ ಸೇರಿದಂತೆ ಅದಕ್ಕೂ ಮೇಲ್ಪಟ್ಟ ತರಗತಿಗೆ ಭೌತಿಕ ತರಗತಿಗಳನ್ನು ನಡೆಸಬೇಕು. 1ರಿಂದ 4ನೇ ತರಗತಿಯವರೆಗೆ ವಿದ್ಯಾಗಮ ರೂಪದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕು ಎಂದು ಅವರು ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News