ಪಿಎಂಎಫ್‍ಎಂಇ ಯೋಜನೆಗೆ ಶೇ.15ರಷ್ಟು ಹೆಚ್ಚುವರಿ ಸಹಾಯಧನ ನೀಡಿದ ರಾಜ್ಯ ಸರಕಾರ

Update: 2022-01-17 13:46 GMT

ಬೆಂಗಳೂರು, ಜ. 17: ರೈತರಿಗೆ ಬಲತುಂಬಲು ರಾಜ್ಯ ಸರಕಾರ ಕೇಂದ್ರದ ಆತ್ಮನಿರ್ಭರ ಭಾರತ ಅಭಿಯಾನ (ಪಿಎಂಎಫ್‍ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

ಪಿಎಂಎಫ್‍ಎಂಇ ಯೋಜನೆಗೆ ಕೇಂದ್ರ ಸರಕಾರ ಕರ್ನಾಟಕಕ್ಕೆ ಶೇ.35ರಷ್ಟು ಅನುದಾನ ಒದಗಿಸಿತ್ತು. ಇದೀಗ ಸರಕಾರ ರೈತರ ಅನುಕೂಲಕ್ಕಾಗಿ ಶೇ.15ರಷ್ಟು ಹೆಚ್ಚಿನ ಸಹಾಯಧನ ನೀಡಿದ್ದು, ಈಗ ಪಿಎಂಎಫ್‍ಎಂಇ ಯೋಜನೆಯ ಸಹಾಯಧನ ಶೇ.50 ರಷ್ಟಾಗಿದೆ. ಪ್ರಧಾನ ಮಂತ್ರಿಗಳ ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಹಾಗೂ ಇತರ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರ ಶೇ.35 ರಷ್ಟನ್ನು ಒದಗಿಸಿತ್ತು.

ಕಳೆದ ಬಾರಿ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ ಶೇ.15 ರಷ್ಟು ಸಹಾಯಧನ ನೀಡಿದ್ದು, ಈಗ ಸಹಾಯಧನ ಶೇ.50ಕ್ಕೆ ಹೆಚ್ಚಿದೆ. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ ಅಡಿ ಪಿಎಂಎಫ್‍ಎಂಇ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಕೃಷಿ ಇಲಾಖೆಯನ್ನು ರಾಜ್ಯದ ನೋಡಲ್ ಇಲಾಖೆಯನ್ನಾಗಿಯೂ ಕೆಪೆಕ್ ಸಂಸ್ಥೆಯನ್ನು ನೋಡಲ್ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‍ಎಂಇ) ಯೋಜನೆಯು 5 ವರ್ಷಗಳ ಅವಧಿಯಲ್ಲಿ 2020-21ನೆ ಸಾಲಿನಿಂದ 2024-25ನೆ ಸಾಲಿನವರೆಗೂ ಜಾರಿಯಲ್ಲಿರುತ್ತದೆ. 2021-22ನೆ ಸಾಲಿನಲ್ಲಿ 2651 ವೈಯಕ್ತಿಕ ಉದ್ದಿಮೆದಾರರಿಗೆ ಹಾಗೂ ಗುಂಪುಗಳಿಗಳಿಗೆ 100 ಉದ್ದಿಮೆಗಳ ಸ್ಥಾಪನೆಗೆ ಸಹಾಯಧನ ಒದಗಿಸುವ ಗುರಿ ಹೊಂದಲಾಗಿದೆ. 

ಸರಕಾರ ರೈತರ ಅನುಕೂಲಕ್ಕಾಗಿ ಅನುದಾನ ಹೆಚ್ಚಿಸಿರುವುದನ್ನು ಶ್ಲಾಘಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತಾಪಿ ಗುಂಪುಗಳು ಮತ್ತು ವೈಯಕ್ತಿಕ ಉದ್ದಿಮೆದಾರರು ಯೋಜನೆಯ ಸದುಪಯೋಗ ಪಡಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News