'ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು': ಕೋವಿಡ್- 19 ಪರಿಶೀಲನಾ ಸಭೆಯ ಮುಖ್ಯಾಂಶಗಳು ಇಲ್ಲಿವೆ...

Update: 2022-01-17 14:42 GMT
ವರ್ಚುಯಲ್ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  

ಬೆಂಗಳೂರು, ಜ. 17: ‘ಕೋವಿಡ್ ಸೋಂಕಿತ ಮಕ್ಕಳ ಕುರಿತು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಪೋಷಕರಿಗೆ ಧೈರ್ಯ ಹೇಳಬೇಕು. ಔಷಧಿ ಕಿಟ್‍ಗಳನ್ನು ನೀಡಬೇಕು. ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸೋಮವಾರ ಕೋವಿಡ್ ವಿಷಯಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತಂತೆ ಅಧಿಕಾರಿಗಳೊಂದಿಗೆ ವರ್ಚುಯಲ್ ಸಭೆ ನಡೆಸಿದ ಅವರು, ‘ಆಕ್ಸಿಜನ್ ಪ್ಲಾಂಟ್‍ಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಜನರೇಟರುಗಳ ವ್ಯವಸ್ಥೆ ಮಾಡಿಕೊಳ್ಳಬೇಕು' ಎಂದು ಸೂಚಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಲಾಕ್ ಡೌನ್ ನಿರ್ಧಾರ ಇಲ್ಲ: ಸಚಿವ ಆರ್.ಅಶೋಕ್

‘ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಕುರಿತು ಹೆಚ್ಚಿನ ನಿಗಾ ವಹಿಸಬೇಕು. 15 ರಿಂದ 18 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕಾ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಸೂಚಿಸಿರುವ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ಕೊಡಬೇಕು. ಅಲ್ಲದೆ, ಹೆಚ್ಚು ಸಿಬ್ಬಂದಿ ನಿಯೋಜಿಸಬೇಕು ಎಂದು ನಿರ್ದೇಶನ ನೀಡಿದರು.

ಜನ ಟ್ರಯಾಜಿಂಗ್‍ಗೆ ದಾಖಲಾಗುವುದನ್ನು ನಿಯಂತ್ರಿಸಬೇಕು. ಹೋಮ್ ಐಸೊಲೇಷನ್ ಕಾಲ್ಸ್ ಹೆಚ್ಚಿಸಲು ಸೂಚಿಸಲಾಯಿತು. ಕೊ-ಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು. ಅಂತೆಯೆ ಮನೆಯವರಿಗೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಔಷಧಿ ಕಿಟ್‍ಗಳನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು. ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರಲ್ಲಿರುವ ನಕಾರಾತ್ಮಕ ಮನೋಭಾವವನ್ನು ತೊಡೆದು ಹಾಕಬೇಕು. ಸ್ಥಳೀಯ ವೈದ್ಯರು ಕನ್ಸಲ್ಟೇಷನ್ ಮಾಡುವಂತಾಗಬೇಕು. ಅಲ್ಲದೆ, ಕೋವಿಡ್ ಲಸಿಕೆ ಅಭಿಯಾನ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಔಷಧಿಗಳನ್ನು ಕೂಡಲೇ ಒದಗಿಸಬೇಕು. ಅವುಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಕ್ರಮ ವಹಿಸಬೇಕು. ಜನರು ಕೋವಿಡ್ ಸೋಂಕು ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದ್ದು, ಕೇಂದ್ರ ಸರಕಾರದ ನಿಯಮಾವಳಿಗಳಂತೆ ಐಸಿಎಂಆರ್ ಸೂಚಿಸಿರುವ ಶ್ರೇಣೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸಲು ಅನುಸರಿಸಬೇಕು ಎಂದು ತಿಳಿಸಿದರು.

ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಲು ನಿರ್ಧರಿಸಲಾಯಿತು. ಅಲ್ಲದೆ, ಕೋವಿಡ್ ಮಾರ್ಗಸೂಚಿ ಹಾಗೂ ವಾರಂತ್ಯದ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News