ಬೆಳಗಾವಿಯಲ್ಲಿ ಮೂರು ಮಕ್ಕಳ ಸಾವು ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು; ಸಚಿವ ಡಾ.ಕೆ.ಸುಧಾಕರ್

Update: 2022-01-17 15:13 GMT

ಬೆಂಗಳೂರು, ಜ.17: ಬೆಳಗಾವಿ ಜಿಲ್ಲೆಯಲ್ಲಿ ‘ರುಬೆಲ್ಲಾ’ ಲಸಿಕೆ(ಚುಚ್ಚುಮದ್ದು) ಪಡೆದಿದ್ದ ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್‍ಎಂ(ಶುಶ್ರೂಷಕಿ) ಮತ್ತು ಫಾರ್ಮಸಿಸ್ಟ್‍ರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಲಸಿಕೆ ನೀಡಿದ್ದ ಶುಶ್ರೂಷಕಿ ಸಲೀಮಾ ಮಹಾತ್ ಹಾಗೂ ಫಾರ್ಮಸಿಸ್ಟ್ ಜಯರಾಜ ಕುಂಬಾರ ಅವರ ಬೇಜವಾಬ್ದಾರಿಯಿಂದಾಗಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ವರದಿ ಬಂದಿದೆ. ಹೀಗಾಗಿ, ಇಬ್ಬರನ್ನು ಅಮಾನತು ಮಾಡಲಾಗಿದೆ. 

ನೋಡಲ್ ಆಫೀಸ್ ಅವರನ್ನು ತನಿಖೆಗೆ ಕಳುಹಿಸುತ್ತಿದ್ದೇನೆ. ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ನೀಡಿದ್ದಾರೋ ಇಲ್ಲವೋ ಎಂದು ತನಿಖೆ ಮಾಡಲಾಗುತ್ತದೆ. ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್‍ನಿಂದ ಮಕ್ಕಳು ಮೃತಪಟ್ಟಿರುವ  ಬಗ್ಗೆ ವರದಿ ಆಗಿದೆ. ಆದರೂ ಮತ್ತೊಂದು ತನಿಖೆಗೆ ಸೂಚನೆ ನೀಡಿದ್ದೇನೆ. ಎರಡು ದಿನಗಳಲ್ಲಿ ವರದಿ ಕೊಡಲು ಸೂಚನೆ ನೀಡಲಾಗಿದೆ ಎಂದರು. 

ಮೃತಪಟ್ಟ ಮೂವರು ಮಕ್ಕಳನ್ನು ರಾಮದುರ್ಗ ತಾಲೂಕಿನ ಬೋಚಬಾಳ್ ಗ್ರಾಮದ ಪವಿತ್ರಾ ಹುಲಗೂರ(13 ತಿಂಗಳು), ಮಧು ಉಮೇಶ್ ಕರಗುಂಡಿ(14 ತಿಂಗಳು) ಮತ್ತು ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ್(15 ತಿಂಗಳು) ಎಂದು ಗುರುತಿಸಲಾಗಿದೆ.  

ಹೊಟೇಲ್ ಫ್ರಿಜ್‍ನಲ್ಲಿ ಲಸಿಕೆ

‘ದಡಾರ ಬಾರದಿರಲೆಂದು ನೀಡುವ ರುಬೆಲ್ಲಾ ಲಸಿಕೆಯನ್ನು ಜ.10ರಂದು ತೆಗೆದುಕೊಂಡು ಹೋಗಿದ್ದ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅಂದೇ ಮಕ್ಕಳಿಗೆ ನೀಡಬೇಕಿತ್ತು ಅಥವಾ ಆಸ್ಪತ್ರೆಯಲ್ಲಿ ನಿಯಮಾನುಸಾರ ಇಡಬೇಕಿತ್ತು. ಆದರೆ, 11 ಮತ್ತು 12ರಂದು ಕೊಟ್ಟಿದ್ದಾರೆ. ಎಎನ್‍ಎಂ ಲಸಿಕೆಯನ್ನು ಕಿಲ್ಲಾ ತೋರಗಲ್ಲ ಗ್ರಾಮದ ತಮ್ಮ ಹೊಟೇಲ್‍ನ ಫ್ರಿಜ್‍ನಲ್ಲಿ ಇಟ್ಟಿದ್ದುದು ಗೊತ್ತಾಗಿದೆ. ಈ ಮೂಲಕ ಅವರು ಮಾರ್ಗಸೂಚಿ (ಕೋಲ್ಡ್‍ಚೈನ್) ಪಾಲಿಸಿಲ್ಲ. ಈ ವ್ಯತ್ಯಾಸದಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎನ್ನುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.’ 

-ಡಾ.ಈಶ್ವರ ಗಡಾದ, ಬೆಳಗಾವಿ ಜಿಲ್ಲಾ ಲಸಿಕಾಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News