ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸಿಪಿಎಂ ರಾಜ್ಯವ್ಯಾಪಿ ಪ್ರತಿಭಟನೆ

Update: 2022-01-17 15:23 GMT

ಬೆಂಗಳೂರು, ಜ. 17: ತಮ್ಮ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪಿತೂರಿಯ ಭಾಗವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ‘ಮತಾಂತರ, ಲವ್ ಜಿಹಾದ್ ಸೇರಿದಂತೆ ಇನ್ನಿತರ ಹೆಸರಿನಲ್ಲಿ ಜನರ ಒಗ್ಗಟ್ಟನ್ನು ಮುರಿಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು, ಕೂಡಲೇ ಈ ಜನವಿರೋಧಿ ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಸಿಪಿಎಂ ಆಗ್ರಹಿಸಿದೆ.

ಸೋಮವಾರ ರಾಜ್ಯಾದ್ಯಂತ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021'ನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಸಿಪಿಎಂ ವತಿಯಿಂದ ಧರಣಿ ಸತ್ಯಾಗ್ರಹ, ಪ್ರದರ್ಶನ ಸೇರಿದಂತೆ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಮುಖಂಡರು, ‘ಬೆಳಗಾವಿ ಅಧಿವೇಶನದಲ್ಲಿ ತರಾತುರಿಯಲ್ಲಿ ಬಿಜೆಪಿ ಸರಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಆಳುವ ವರ್ಗಗಳು ತಾವು ಬಯಸಿದಾಗಲೆಲ್ಲಾ ರಾಜ್ಯದಲ್ಲಿ ಅಶಾಂತಿಯನ್ನುಂಟು ಮಾಡುವ ದುರುದ್ದೇಶದಿಂದ ಹೆಣೆಯಲಾಗಿದೆ' ಎಂದು ದೂರಿದರು.

‘ಕೋಮು ಹಾಗೂ ಜಾತಿ ದ್ವೇಷಗಳನ್ನು ಮುಂದುವರೆಸುವ ಮತ್ತು ದುಡಿಯುವ ಜನತೆಯನ್ನು ವಿಭಜಿಸಿ ಆಳಲು, ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ ದುರುದ್ದೇಶದಿಂದ ರೂಪಿಸಲಾದ ಸಂವಿಧಾನ ವಿರೋಧಿ ವಿಧೇಯಕವನ್ನು ಕೂಡಲೇ ಹಿಂಪಡೆಯಬೇಕು ಎಂದು ಇದೇ ಸಂದರ್ಭದಲ್ಲಿ ಮುಖಂಡರು ಆಗ್ರಹಿಸಿದರು.

ಉದ್ದೇಶಿತ ವಿಧೇಯಕವು ವ್ಯಕ್ತಿಯು ತನಗಿಷ್ಟವಾದ ಧರ್ಮವನ್ನು ಆಚರಿಸುವುದಕ್ಕೆ ಸರಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುತ್ತದೆ. ಆ ಮೂಲಕ ವ್ಯಕ್ತಿಯು ತನಗಿಷ್ಟ ಬಂದ ಧರ್ಮವನ್ನು ಆಚರಿಸುವ, ಸಂವಿಧಾನ ಕೊಡ ಮಾಡಿದ ಹಕ್ಕನ್ನು ಉಲ್ಲಂಘಿಸುತ್ತದೆ. ಅದೇ ರೀತಿ, ಮತಾಂತರದ ಧಾರ್ಮಿಕ ವಿಧಿ, ವಿಧಾನಗಳನ್ನು ಪ್ರತಿರೋಧಿಸುತ್ತದೆ ಎಂದು ಆಕ್ಷೇಪಿಸಲಾಗಿದೆ.

ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆಯ ಹೆಸರಿನಲ್ಲಿ ಅಪ್ರತ್ಯಕ್ಷವಾಗಿ, ಜಾತಿ ತಾರತಮ್ಯ, ಅಸ್ಪೃಶ್ಯತೆ ಆಚರಣೆಗಳನ್ನು ಘೋಷಿಸಲು ಮತ್ತು ವಂಚಕ ಜಾತಿ ಪದ್ಧತಿಯಲ್ಲಿ ಶೋಷಿತರು ಸಿಲುಕಿ ನರಳುವಂತೆ ಮಾಡುವ ಸಂಚನ್ನು ಈ ಕಾಯ್ದೆ ಹೊಂದಿದೆ. ಅಲ್ಲದೆ, ಯುವಕ-ಯುವತಿಯರ ಅಂತಜಾರ್ತೀಯ ಮತ್ತು ಅಂತಧರ್ಮೀಯ ವೈವಾಹಿಕ ಹಕ್ಕನ್ನು ನಿರ್ಬಂಧಿಸುತ್ತದೆ ಎಂದು ತಿಳಿಸಲಾಗಿದೆ.

ಈ ಕಾಯ್ದೆಯು ಹಲವು ಕರಾಳ ಸ್ವರೂಪದ ಆಘಾತಕಾರಿ ನಿಯಮಗಳನ್ನು ಒಳಗೊಂಡಿದ್ದು ನಮ್ಮ ಸಮಾಜದ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿಕೊಂಡಿದೆ ಎಂಬುದು ಸ್ಪಷ್ಟ. ಯಾವುದೇ ವ್ಯಕ್ತಿಯನ್ನು ಯಾವುದೇ ಮತಗಳು ಬಲವಂತವಾಗಿ, ಮತಾಂತರ ಹಾಗೂ ಮರು ಮತಾಂತರ ಮಾಡುವ ದೌರ್ಜನ್ಯದ ಕ್ರಮಗಳನ್ನು ಸಿಪಿಎಂ ವಿರೋಧಿಸುತ್ತದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News