''ಕನ್ನಡ ನೆಲದಲ್ಲಿ ಕನ್ನಡವನ್ನೇ ವಿರೋಧಿಸುತ್ತಾರೆಂದರೆ ಅದೆಂತಾ ದರ್ಪವಿರಬೇಕು ಇವರಿಗೆ'': ಕವಿರಾಜ್

Update: 2022-01-17 17:39 GMT
                      ಕವಿರಾಜ್

ಬೆಂಗಳೂರು: ಮಾಗಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಗೀತ ರಚನೆಕಾರ, ನಿರ್ದೇಶಕ ಕವಿರಾಜ್ ಪ್ರತಿಕ್ರಿಯಿಸಿದ್ದಾರೆ. 

ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು,  ''ಮೊನ್ನೆಯಷ್ಟೇ ಕರ್ನಾಟಕ ಸರ್ಕಾರ ಕನ್ನಡ ನೆಲದಲ್ಲಿ ಕನ್ನಡ ಕಡ್ಡಾಯ ಮಾಡುವುದನ್ನು ವಿರೋಧಿಸಿ ಸಂಸ್ಕೃತ ಭಾರತಿ ಹಾಗೂ ಸಂಸ್ಕೃತ ಪ್ರಾಧ್ಯಾಪಕರ ಸಂಘ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿ ತಡೆಯಾಜ್ಞೆ ತಂದಿವೆ. ಕನ್ನಡ ನೆಲದಲ್ಲಿ ಕನ್ನಡ ಕಡ್ಡಾಯ ಎಂದರೆ ಇವರಿಗೇನು ತಕರಾರು ??  ಅಧಿಕೃತವಾಗೇ ಕನ್ನಡ ನೆಲದಲ್ಲಿ ಕನ್ನಡವನ್ನೇ ವಿರೋಧಿಸುತ್ತಾರೆ ಎಂದರೆ ಅದೆಂತಾ ದರ್ಪವಿರಬೇಕು ಇವರಿಗೆ'' ಎಂದು ಕಿಡಿಗಾರಿದ್ದಾರೆ. 

''ಇದೀಗ ತಮ್ಮ ಧಣಿಗಳ ಬಳಗವನ್ನು ಮೆಚ್ಚಿಸಲು 2011ರ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಕೇವಲ  1218 ಜನರ ಮಾತೃಭಾಷೆ ಎಂದು ದಾಖಲಾಗಿರುವ ಸಂಸ್ಕೃತದ ಯೂನಿವರ್ಸಿಟಿ ಸ್ಥಾಪನೆಗಾಗಿ, ಕರ್ನಾಟಕ ಸರ್ಕಾರ  ಆರ್ಥಿಕ ದುಸ್ಥಿತಿಯ ಕಾಲದಲ್ಲಿ ಕನ್ನಡಿಗರ ತೆರಿಗೆ ಹಣದ 359 ಕೋಟಿ ರೂಪಾಯಿ ನೀಡಲು ಹೊರಟಿದೆ. ತಲೆಯ ಮೇಲೆ ಹಾಕಿದ ನೀರು ಕಾಲಿಗಿಳಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಹಜವಾಗಿಯೇ ಇದನ್ನು ಸ್ವಾಭಿಮಾನಿ ಕನ್ನಡಿಗರು ವಿರೋಧಿಸುತ್ತಿದ್ದಾರೆ'' ಎಂದು ಹೇಳಿದ್ದಾರೆ. 

''ಆದರೆ ಅಚ್ಚರಿ, ಅಸಹ್ಯ ಅನಿಸುತ್ತಿರುವುದು ಅಂದು ಸಂಸ್ಕೃತದವರು ಕನ್ನಡವನ್ನು ಅಧಿಕೃತವಾಗೇ ವಿರೋಧಿಸಿದಾಗ ಮುಗುಮ್ಮಾಗಿದ್ದ , ಕನ್ನಡ ನೆಲದಲ್ಲಿ ಹುಟ್ಟಿ , ಬೆಳೆದು ಬದುಕು ಕಟ್ಟಿಕೊಂಡಿರುವ ಒಂದು ವರ್ಗದ ಕನ್ನಡಿಗರು, ಈಗ ಸ್ವಾಭಿಮಾನಿ ಕನ್ನಡಿಗರಿಗೆ ಭಾಷಾ ಸೌಹಾರ್ದತೆ , ರಾಷ್ಟ್ರೀಯತೆಯ ಪಾಠ ಹೇಳಲು ಬರುತ್ತಿದ್ದಾರೆ ಎಂದರೆ ಎಂಥಾ ಹಿಪೋಕ್ರೇಟ್ಸ್ ಈ ಜನಗಳು. ಬಹುಶಃ ನಮ್ಮವರೇ ನಮ್ಮ ನಾಡು ನುಡಿಯ ಹಿತಾಸಕ್ತಿಗೆ ಅಡ್ಡಗಾಲಾಗಿರುವ ನಾಡು ಜಗತ್ತಿನಲ್ಲಿ ನಮ್ಮದೊಂದೇ ಎಂದು'' ತನ್ನ ಫೇಸ್ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News