ಐಸಿಯುನಲ್ಲಿ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಸ್ಥಿರ: ಸುಳ್ಳು ಸುದ್ದಿಗಳನ್ನು ನಿರಾಕರಿಸಿದ ವಕ್ತಾರರು

Update: 2022-01-17 17:20 GMT

ಮುಂಬೈ,ಜ.17: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (92) ಅವರಿಗೆ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ.ಪ್ರತೀತ ಸಮ್ದಾನಿ ಅವರು ಸೋಮವಾರ ತಿಳಿಸಿದರು.

 ಸೌಮ್ಯ ಲಕ್ಷಣಗಳೊಂದಿಗೆ ಕೊರೋನ ಸೋಂಕಿನಿಂದಾಗಿ ಮಂಗೇಶ್ಕರ್ ಅವರನ್ನು ಕಳೆದ ವಾರ ಐಸಿಯುಗೆ ದಾಖಲಿಸಲಾಗಿತ್ತು. ಸೋಮವಾರ ಮಧ್ಯಾಹ್ನದ ವೇಳೆಗೆ ಮಂಗೇಶ್ಕರ್ ಅವರ ಸ್ಥಿತಿ ತೀವ್ರ ಹದಗೆಡುತ್ತಿದೆ ಎಂಬ ವದಂತಿಗಳ ನಡುವೆ ಅವರ ವಕ್ತಾರರಾದ ಅನುಷಾ ಶ್ರೀನಿವಾಸನ್ ಅಯ್ಯರ್ ಮಾಧ್ಯಮ ವರದಿಗಳನ್ನು ನಿರಾಕರಿಸಿ,ಇವೆಲ್ಲ ಸುಳ್ಳುಸುದ್ದಿಗಳಾಗಿವೆ ಎಂದು ತಿಳಿಸಿದರು.

‘ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿರುವುದನ್ನು ನೋಡಿ ಆತಂಕವುಂಟಾಗಿದೆ. ಲತಾ ದೀದಿ ಆರೋಗ್ಯ ಸ್ಥಿರವಾಗಿದೆ. ಅವರು ಐಸಿಯುನಲ್ಲಿ ಸಮರ್ಥ ವೈದ್ಯರ ಚಿಕಿತ್ಸೆಯಲ್ಲಿದ್ದಾರೆ. ಅವರು ಬೇಗನೆ ಮನೆಗೆ ಮರಳುವಂತಾಗಲೆಂದು ಪ್ರಾರ್ಥಿಸಿ ’ಎಂದು ಅಯ್ಯರ್ ಹೇಳಿಕೆಯಲ್ಲಿ ತಿಳಿಸಿದರು.

ಬೆಳಿಗ್ಗೆ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ ಟೋಪೆ ಅವರು,ಮಂಗೇಶ್ಕರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ತಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು,ಅವರು ಇತ್ತೀಚಿನ ಮಾಹಿತಿಗಳನ್ನು ಒದಗಿಸಿದ್ದಾರೆ ಎಂದು ಜಾಲ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News