ಸಿಎಂ ಗೃಹ ಕಚೇರಿ ಎದುರು ಮಾಜಿ ಸಚಿವ ಎಚ್.ಡಿ.ರೇವಣ್ಣ ಏಕಾಂಗಿ ಧರಣಿ

Update: 2022-01-18 15:25 GMT

ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನೋವಿಜ್ಞಾನ ಮತ್ತು ಫುಡ್ ಅಂಡ್ ನ್ಯೂಟ್ರಿಷನ್ ವಿಷಯಗಳಲ್ಲಿ ಎಂ.ಎಸ್ಸಿ ಪದವಿ ಆರಂಭಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅಡ್ಡಗಾಲು ಹಾಕುತ್ತಿದ್ದಾರೆಂದು ಆರೋಪಿಸಿ ಮಾಜಿ ಸಚಿವ, ಜೆಡಿಎಸ್ ಹಿರಿಯ ಶಾಸಕ ಎಚ್.ಡಿ.ರೇವಣ್ಣ, ಮುಖ್ಯಮಂತ್ರಿಯ ಗೃಹಕಚೇರಿ ಕೃಷ್ಣಾ ಎದುರು ಮಂಗಳವಾರ ಧರಣಿ ನಡೆಸಿದರು.

ಬಡವರ ಮಕ್ಕಳು ವಿದ್ಯಾಭ್ಯಾಸ ಮಾಡುವ ಕಾಲೇಜಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎಚ್.ಡಿ.ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ಈ ಎರಡು ಕೋರ್ಸುಗಳನ್ನು ಆರಂಭಿಸಲು ಮೈಸೂರು ವಿವಿಯ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿತ್ತು. ಆದರೆ, ಈಗ ಉನ್ನತ ಶಿಕ್ಷಣ ಸಚಿವರು ಅದನ್ನು ರದ್ದು ಮಾಡಿದ್ದಾರೆ ಎಂದು ಅವರು ಕಿಡಿಗಾರಿದರು.

ಸರಕಾರದ ಬಳಿ ಹಣವಿಲ್ಲದಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೇನೆ. ವಿವಿ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಒಪ್ಪಿಗೆ ಕೊಟ್ಟರೂ ಸಚಿವರು ಏಕೆ ವಿರೋಧ ಮಾಡುತ್ತಿದ್ದಾರೆ. ಖಾಸಗಿ ಕಾಲೇಜುಗಳಿಗೆ ಅನುಮತಿ ಸಿಗುತ್ತದೆ, ಆದರೆ, ಬಡವರ ಮಕ್ಕಳು ಓದುವಂತಹ ಸರಕಾರಿ ಕಾಲೇಜುಗಳ ಬಗ್ಗೆ ಯಾಕೆ ತಾತ್ಸಾರ ಎಂದು ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಈ ಎರಡು ಕೋರ್ಸುಗಳಿಗೆ ಪ್ರವೇಶ ಬಯಸಿ ತಲಾ 20 ವಿದ್ಯಾರ್ಥಿನಿಯರು ಈಗಾಗಲೆ ಅರ್ಜಿ ಸಲ್ಲಿಸಿದ್ದಾರೆ. ಸರಕಾರಿ ಮಹಿಳಾ ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಿಲ್ಲ. ನಾವು 20 ಲಕ್ಷ ರೂ.ವೆಚ್ಚದಲ್ಲಿ ಅದನ್ನು ಅಭಿವೃದ್ಧಿಪಡಿಸಿದ್ದೇವೆ. ಹಾಸನ ಹಾಲು ಒಕ್ಕೂಟದ ವತಿಯಿಂದ 25 ಕಂಪ್ಯೂಟರ್ ಗಳನ್ನು ಹಾಗೂ ಡೆಸ್ಕ್ ಸೇರಿದಂತೆ ಪ್ರಯೋಗಾಲಯದ ಉಪಕರಣಗಳನ್ನು 5 ಲಕ್ಷ ರೂ.ವೆಚ್ಚದಲ್ಲಿ ಒದಗಿಸಲಾಗಿದೆ ಎಂದು ರೇವಣ್ಣ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದುದರಿಂದ, ನಾನು ಧರಣಿ ಕೈ ಬಿಡುತ್ತಿದ್ದೇನೆ ಎಂದು ಅವರು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News