ಕಳಸ: ದಯಾಮರಣಕ್ಕೆ ಅನುಮತಿ ನೀಡಲು ಒತ್ತಾಯಿಸಿ ಅತಿಥಿ ಉಪನ್ಯಾಸಕರಿಂದ ಸರಕಾರಕ್ಕೆ ಪತ್ರ

Update: 2022-01-18 15:40 GMT

ಕಳಸ, ಜ.18: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇತ್ತೀಚೆಗೆ ಹೊರಡಿಸಿರುವ ಆದೇಶದಿಂದಾಗಿ ಸಾವಿರಾರು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುವಂತಾಗಿದೆ ಎಂದು ಆರೋಪಿಸಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಮಂಗಳವಾರ ದಯಾಮರಣ ಕೋರಿ ಸರಕಾರಕ್ಕೆ ಪತ್ರ ಬರೆದು ಧರಣಿ ನಡೆಸಿದರು.

ಪಟ್ಟಣದ ಸರಕಾರಿ ಪದವಿ ಕಾಲೇಜಿನ 6 ಮಂದಿ ಅತಿಥಿ ಉಪನ್ಯಾಸಕರು ಮಂಗಳವಾರ ತರಗತಿ ಬಹಿಷ್ಕರಿಸಿ ಕಾಲೇಜಿನ ಎದುರು ಭಿತ್ತಿ ಪತ್ರಗಳನ್ನು ಹಿಡಿದು ಸರಕಾರದ ಆದೇಶದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತಮಗೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅತಿಥಿ ಉಪನ್ಯಾಸಕರು, ರಾಜ್ಯಾದ್ಯಂತ ಸರಕಾರಿ ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಉಪನ್ಯಾಸ ನೀಡುತ್ತಿರುವ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರಕಾರ ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ಕಡಿಮೆ ವೇತನ ನೀಡಿ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದೆ. ಸರಕಾರದ ನೀಡುವ ವೇತನ ಉಪನ್ಯಾಸಕರು ಜೀವನ ನಡೆಸಲೂ ಸಾಲುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೇವಾ ಭದ್ರತೆ ಅಥವಾ ಸೇವಾ ವಿಲೀನತೆ ನೀಡುವಂತೆ ಇತ್ತೀಚೆಗೆ ಅತಿಥಿ ಉಪನ್ಯಾಸಕರು ಹೋರಾಟ ಕೈಗೊಂಡಿದ್ದು, ಇದಕ್ಕೆ ರಾಜ್ಯ ಸರಕಾರ ಸ್ಪಂದಿಸುವ ನಾಟಕ ಆಡಿ ಅತಿಥಿ ಉಪನ್ಯಾಸಕರ ಜೀವನದೊಂದಿಗೆ ಚೆಲ್ಲಾಟ ಆಡುವ ಆದೇಶ ನೀಡಿದೆ ಎಂದು ಅಸಮಾಧಾನ ಹೊರಹಾಕಿದರು.

ಸರಕಾರದ ಆದೇಶದಿಂದಾಗಿ 14 ಸಾವಿರ ಅತಿಥಿ ಉಪನ್ಯಾಸಕರ ಪೈಕಿ ಅರ್ಧದಷ್ಟು ಉಪನ್ಯಾಸಕರು ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಕಳೆದುಕೊಂಡು ಬೀದಿಪಾಲಾಗುವುದಕ್ಕಿಂತ ಸಾಯುವುದೇ ಲೇಸು. ಈ ಕಾರಣಕ್ಕೆ ಸರಕಾರ ಕೆಲಸ ಕಳೆದುಕೊಳ್ಳುವ ಉಪನ್ಯಾಸಕರಿಗೆ ದಯಾಮರಣಕ್ಕೆ ಅನುಮತಿ ನೀಡಬೇಕು. ಇಲ್ಲವೇ ಆದೇಶ ಹಿಂಪಡೆದು ಸೇವಾ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.
ಕಾಲೇಜಿನ ಅತಿಥಿ ಉಪನ್ಯಾಸಕರಾದ ಫಕೀರಪ್ಪ, ಪ್ರಸಾದ್, ಸುಭಾಶ್ ಧರಣಿ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News