ರಾಜ್ಯದಲ್ಲಿ ಕೋವಿಡ್ ಏರಿಕೆ ನಡುವೆಯೂ ಆಸ್ಪತ್ರೆ ಬೆಡ್ ಖಾಲಿ ಖಾಲಿ...

Update: 2022-01-19 03:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 41 ಸಾವಿರಕ್ಕೆ ಏರಿದ್ದರೂ, ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಮೀಸಲಿರಿಸಿದ್ದ ಬೆಡ್‌ಗಳಲ್ಲಿ ಶೇಕಡ 5.3ರಷ್ಟು ಮಾತ್ರ ಭರ್ತಿಯಾಗಿವೆ. ಈ ಹಿಂದೆ ಇದ್ದ ಶೇಕಡ 3ಕ್ಕೆ ಹೋಲಿಸಿದರೆ ಇದು ಅಲ್ಪ ಅಧಿಕ. ಸೋಮವಾರದ ವೇಳೆಗೆ ರಾಜ್ಯದ ಆಸ್ಪತ್ರೆಗಳಲ್ಲಿ 2548 ಬೆಡ್‌ಗಳು ಕೋವಿಡ್-19 ಸೋಂಕಿತರಿಂದ ಭರ್ತಿಯಾಗಿದ್ದರೆ, ಮಂಗಳವಾರ ಈ ಪ್ರಮಾಣ 4795ಕ್ಕೆ ಹೆಚ್ಚಿದೆ.

ಮಂಗಳವಾರದ ವೇಳೆಗೆ ಜನರಲ್ ವಾರ್ಡ್‌ನ 3451 ಬೆಡ್‌ಗಳು, ಆಮ್ಲಜನಕ ವ್ಯವಸ್ಥೆಯಿಂದ ಕೂಡಿದ 935 ಬೆಡ್‌ಗಳು, 297 ಐಸಿಯು ಬೆಡ್ ಹಾಗೂ 112 ವೆಂಟಿಲೇಟರ್ ಬೆಡ್‌ಗಳು ಭರ್ತಿಯಾಗಿವೆ ಎನ್ನುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 628 ಮಂದಿ ಕೋವಿಡ್ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ 1.9 ಲಕ್ಷ ಆಸ್ಪತ್ರೆ ಬೆಡ್‌ಗಳ ಪೈಕಿ 90 ಸಾವಿರ ಬೆಡ್‌ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ.

ಆತಂಕಕಾರಿ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲದ ಕಾರಣ ಈ ಸ್ಥಿತಿ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಎರಡನೇ ಅಲೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಇರಬೇಕಾದ ಅವಧಿ 8-10 ದಿನ ಇದ್ದರೆ ಈ ಅಲೆಯಲ್ಲಿ ಇದು 2-3 ದಿನಕ್ಕೆ ಸೀಮಿತವಾಗಿದೆ. ವೈರಸ್ ಮೇಲಿನ ಮಟ್ಟದ ಉಸಿರಾಟ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದೆಯೇ ವಿನಃ ಶ್ವಾಸಕೋಶದ ಮೇಲಲ್ಲ. ಜತೆಗೆ ಬಹುತೇಕ ವಯಸ್ಕರಿಗೆ ಲಸಿಕೆ ನೀಡಲಾಗಿದ್ದು, ಇದು ಈ ಬಾರಿ ಚಿತ್ರಣ ಬದಲಾಗಲು ಕಾರಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಣದೀಪ್ ಹೇಳಿದ್ದಾರೆ.

ಪ್ರಸ್ತುತ ಪ್ರತಿದಿನ 500-800 ಸೋಂಕಿತರು ಆಸ್ಪತ್ರೆಗೆ ನಿರ್ಭೀತಿಯಿಂದ ಬರುತ್ತಿದ್ದಾರೆ. ಇವರು ಸ್ಥಿರವಾಗಿರುತ್ತಾರೆ ಹಾಗೂ ಅದೇ ದಿನ ಅವರನ್ನು ಆಸ್ಪತ್ರೆಯಿಂದ ವಾಪಾಸು ಕಳುಹಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಎರಡನೇ ಅಲೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 1.5 ಲಕ್ಷ ಸಕ್ರಿಯ ಪ್ರಕರಣಗಳು ಇದ್ದವು. ಆದ್ದರಿಂದ ಅಸ್ವಸ್ಥರಿಗೆ ಹಾಸಿಗೆಗಳೇ ಸಿಗದ ಸ್ಥಿತಿ ಇತ್ತು. ಐಸಿಯು ಚಿಕಿತ್ಸೆ ಅಗತ್ಯ ಇದ್ದ ರೋಗಿಗಳೂ ಜನರಲ್ ವಾರ್ಡ್‌ಗಳಲ್ಲಿ ಇದ್ದರು. ದಿನಕ್ಕೆ ಕನಿಷ್ಠ 20 ಮಂದಿ ಸಾಯುತ್ತಿದ್ದರು ಎಂದು ಪ್ರಮುಖ ಆಸ್ಪತ್ರೆಯೊಂದರ ಅಧಿಕಾರಿಗಳು ಹೇಳುತ್ತಾರೆ.

ಕೋವಿಡ್ ಟೆಕ್ನಿಕಲ್ ಅಡ್ವೈಸರಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಹೇಳುವಂತೆ, ಈ ಬಾರಿ ಬಹುತೇಕ ಪ್ರಕರಣಗಳಲ್ಲಿ ಸೋಂಕು ಸೌಮ್ಯ ಸ್ವರೂಪದ್ದಾಗಿದೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಬೆಡ್‌ಗಳಿಗೆ ಬೇಡಿಕೆ ಇಲ್ಲ. ಶೇಕಡ 93ಕ್ಕಿಂತಲೂ ಹೆಚ್ಚು ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ಇರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News