ನರಗುಂದ ಸಮೀರ್ ಕೊಲೆ ಪ್ರಕರಣ: ಬಜರಂಗ ದಳದ ಕಾರ್ಯಕರ್ತರಾದ ನಾಲ್ವರು ಆರೋಪಿಗಳ ಬಂಧನ

Update: 2022-01-19 06:44 GMT
ಮಲ್ಲಿಕಾರ್ಜುನ, ಚನ್ನಬಸಪ್ಪ, ಸಕ್ರಪ್ಪ  ಸಂಜು ನಲವಡಿ

ನರಗುಂದ, ಜ.19: ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನರಗುಂದ ನಿವಾಸಿ ಸಮೀರ್ ಶಹಪುರ(19) ಎಂಬ ಯುವಕನನ್ನು ಕೊಲೆಗೈದು ಇನ್ನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಬಜರಂಗ ದಳದ ಮುಖಂಡ ಸಹಿತ ನಾಲ್ವರು ಕಾರ್ಯಕರ್ತರನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಬಜರಂಗದಳದ ಮುಖಂಡನಾದ ಸುಬೇದಾರ್ ಓಣಿಯ ಗುತ್ತಿಗೆದಾರ ಸಂಜು ಮಾರುತಿ ನಲವಡಿ, ಕಾರ್ಯಕರ್ತರಾದ ನರಗುಂದ ಪಟ್ಟಣದ ಸಿದ್ದನಬಾವಿ ಓಣಿ ನಿವಾಸಿ ಮಲ್ಲಿಕಾರ್ಜುನ ಅಲಿಯಾಸ್ ಗುಂಡ್ಯ ಮುತ್ತಪ್ಪ ಹಿರೇಮಠ, ಚನ್ನಬಸಪ್ಪ ಅಲಿಯಾಸ್ ಚನ್ನಪ್ಪ ಚಂದ್ರಶೇಖರ ಅಕ್ಕಿ ಹಾಗೂ ವಾಸವಿ ಕಲ್ಯಾಣ ಮಂಟಪ ಬಳಿ ನಿವಾಸಿ ಸಕ್ರಪ್ಪ ಹನುಮಂತಪ್ಪ ಕಾಕನೂರು ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ನರಗುಂದದಲ್ಲಿ ಹೊಟೇಲ್ ನಡೆಸುತ್ತಿದ್ದ ಸಮೀರ್ ಶಹಪುರ ಸೋಮವಾರ ರಾತ್ರಿ ತನ್ನ ಹೊಟೇಲ್ ಬಂದ್‌ ಮಾಡಿ ಸಮೀಪದಲ್ಲೇ ಸ್ಟುಡಿಯೋ ನಡೆಸುತ್ತಿದ್ದ ಗೆಳೆಯ ಶಂಶೀರ್‌ ಎಂಬವರ ಜೊತೆ ಬೈಕ್‌ನಲ್ಲಿ ತನ್ನ ಮನೆಯತ್ತ ತೆರಳುತ್ತಿದ್ದ ವೇಳೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಮಲ್ಲಿಕಾರ್ಜುನ ಮತ್ತು 10-15 ಮಂದಿಯ ತಂಡ ಇವರ ಬೈಕನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ನಡೆಸಿತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸಮೀರ್ ಮತ್ತು ಶಂಶೀರ್ ಅವರನ್ನು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಮೀರ್ ಮಂಗಳವಾರ ಬೆಳಗ್ಗಿನ ಜಾವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಘಟನೆ ನಡೆದ ಕೂಡಲೇ ಗಾಯಾಳುಗಳಿಬ್ಬರನ್ನು ಸಾರ್ವಜನಿಕರು ನರಗುಂದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಮೀರ್ ಪೊಲೀಸರಿಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News