ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪರಸ್ಪರ ಢಿಕ್ಕಿಯಾಗುವುದರಿಂದ ಕೂದಲೆಳೆಯಿಂದ ಪಾರಾದ ಎರಡು ವಿಮಾನಗಳು

Update: 2022-01-19 09:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡುವಾಗ ಎರಡು ಇಂಡಿಗೋ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆಯುವ ಹಂತಕ್ಕೆ ಬಂದಿದ್ದರೂ ಕೂದಲೆಳೆಯಿಂದ ಅಪಘಾತ ತಪ್ಪಿದ ಘಟನೆ ಜನವರಿ 7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ಕೊಲ್ಕತ್ತಾಗೆ ಹೊರಟಿದ್ದ 6ಇ 455 ವಿಮಾನ ಹಾಗೂ ಭುಬನೇಶ್ವರಕ್ಕೆ ಹೊರಟಿದ್ದ 6ಇ 246 ವಿಮಾನಗಳಿಗೆ ಬಹುತೇಕ ಒಂದೇ ನಿರ್ಗಮನ ಸಮಯ ನೀಡಲಾಗಿತ್ತು. ನಿಲ್ದಾಣದಲ್ಲಿ ಉತ್ತರ ದಿಕ್ಕು ಹಾಗೂ ದಕ್ಷಿಣ ದಿಕ್ಕಿನಲ್ಲಿ ಎರಡು ರನ್ ವೇಗಳಿದ್ದರೂ ಏಕಕಾಲದಲ್ಲಿ ವಿಮಾನಗಳ ನಿರ್ಗಮನಕ್ಕೆ ಈ ರನ್-ವೇಗಳು ಬಳಕೆಯಾಗುತ್ತಿಲ್ಲ.

"ಘಟನೆ ನಡೆದ ದಿನ ಉತ್ತರದ ರನ್-ವೇ ನಿರ್ಗಮನ ವಿಮಾನಗಳಿಗೆ ಹಾಗೂ ದಕ್ಷಿಣದ ರನ್ ವೇ ಆಗಮಿಸುವ ವಿಮಾನಗಳಿಗೆ ಮೀಸಲಿತ್ತು. ನಂತರ ಶಿಫ್ಟ್ ಉಸ್ತುವಾರಿ ಅಧಿಕಾರಿ ದಕ್ಷಿಣದ ರನ್ ವೇ ಮುಚ್ಚಲು ನಿರ್ಧರಿಸಿದ್ದರೂ ದಕ್ಷಿಣ ಟವರ್‌ನ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಮಾಹಿತಿ ನೀಡಿರಲಿಲ್ಲ,'' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು thehindu.com ವರದಿ ಮಾಡಿದೆ.

ಪರಿಣಾಮ ಎರಡೂ ವಿಮಾನಗಳಿಗೆ ಟೇಕ್ ಆಫ್‌ಗೆ ಅದೇ ಸಮಯದಲ್ಲಿ ಅನುಮತಿಸಲಾಗಿತ್ತು. ಇದರಿಂದ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ರಾಡಾರ್ ಕಂಟ್ರೋಲರ್ ಇದನ್ನು ಗುರುತಿಸಿ ತಕ್ಷಣ ವಿಮಾನಗಳಿಗೆ ಮಾಹಿತಿ ನೀಡಲಾಗಿ ಸಂಭಾವ್ಯ ಅವಘಡ ತಪ್ಪಿತ್ತು ಎಂದು ವರದಿಯಾಗಿದೆ.

ಘಟನೆ ನಂತರ ತಿಳಿದು ಬಂದಿದ್ದರಿಂದ ಈಗ ಡಿಜಿಸಿಎ ತನಿಖೆ ನಡೆಸುತ್ತಿದೆ. ಘಟನೆ ಸಂಬಂಧ ಪ್ರತಿಕ್ರಿಯಿಸಲು ಇಂಡಿಗೋ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News