ಗಾಂಜಾ ಮಾರಾಟ ದಂಧೆಯಲ್ಲಿ ಸಿಎಂ ಭದ್ರತಾ ಸಿಬ್ಬಂದಿ ಭಾಗಿ ಪ್ರಕರಣ: ಆರ್.ಟಿ.ನಗರ ಠಾಣೆ ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು

Update: 2022-01-19 11:01 GMT

ಬೆಂಗಳೂರು, ಜ.19: ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಆರೋಪದಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸರು ಸಿಕ್ಕಿಬಿದ್ದ ಬೆನ್ನಲ್ಲೆ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ ಎಂಬ ಕಾರಣಕ್ಕೆ ಇನ್ ಸ್ಪೆಕ್ಟರ್ ಸಹಿತ ಇಬ್ಬರನ್ನು ಅಮಾನತುಗೊಳಿಸಿ  ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಡಿಸಿಪಿಗಳಿಗೆ ಮೆಮೋ ನೀಡಿ ಉತ್ತರ ನೀಡುವಂತೆ ಸೂಚಸಿದ್ದಾರೆ.

ಆರ್.ಟಿ.ನಗರ ಇನ್ ಸ್ಪೆಕ್ಟರ್ ಅಶ್ವಥ್ ಗೌಡ ಮತ್ತು ಪಿಎಸ್ಸೈ ವೀರಭದ್ರ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.

ಅದಲ್ಲದೆ ಪೂರ್ವಪರ ಪರಿಶೀಲನೆ ನಡೆಸದೆ ಮುಖ್ಯಮಂತ್ರಿ ನಿವಾಸಕ್ಕೆ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದ ಕಾರಣಕ್ಕೆ ಡಿಸಿಪಿ ಸೌತ್ ಈಸ್ಟ್ ಶ್ರೀನಾಥ್ ಜೋಶಿಯವರಿಗೆ ಮತ್ತು ಮುಖ್ಯಮಂತ್ರಿ ನಿವಾಸದ ಭದ್ರತೆಯಲ್ಲಿ ಹಾಗೂ ನಿಯೋಜಿತ ಸಿಬ್ಬಂದಿಯಮೇಲೆ ನಿಗಾ ಇರಿಸದಿರುವುದು, ಸರಿಯಾದ ರೀತಿಯಲ್ಲಿ ಭದ್ರತೆ ನೀಡದಿರುವ ಕಾರಣ ವಿಐಪಿ ಡಿಸಿಪಿ ಮಂಜುನಾಥ್ ಬಾಬು ಪೊಲೀಸ್ ಆಯುಕ್ತರು ಮೆಮೊ ನೀಡಿ, ಉತ್ತರಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?: 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಕೋರಮಂಗಲ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗಳಾದ ಶಿವಕುಮಾರ್ ಹಾಗೂ ಸಂತೋಷ್ ಅವರನ್ನು ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಬ್ಬರು ಇಲ್ಲಿನ ಆರ್ಟಿ ನಗರದಲ್ಲಿರುವ ಮುಖ್ಯಮಂತ್ರಿ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದರು. ಹಲವು ದಿನಗಳಿಂದ ಪೆಡ್ಲರ್ಗಳಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಯಾರಿಗೂ ಅನುಮಾನ ಬಾರದಿರಲೆಂದು ಮುಖ್ಯಮಂತ್ರಿ ಮನೆ ಸಮೀಪದಲ್ಲಿ ಆನ್ಲೈನ್ ಡೆಲಿವರಿ ಮೂಲಕ ಮಾದಕ ವಸ್ತು ತರಿಸಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಗಾಂಜಾ ತರಿಸಿಕೊಂಡಿದ್ದಾಗ ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಪಾಸಣೆಗೊಳಪಡಿಸಿದಾಗ ಪೊಲೀಸರು ಎಂದು ಗೊತ್ತಾಗಿದೆ. ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅಖಿಲ್ರಾಜ್ ಹಾಗೂ ಅಮ್ಜದ್ಖಾನ್ ಬಳಿ ಗಾಂಜಾ ಖರೀದಿಸಿದ್ದರು ಎಂಬುದು ತಿಳಿದುಬಂದಿದೆ. ಈ ಸಂಬಂಧ ಇಬ್ಬರು ಕಾನ್ಸ್ಟೇಬಲ್ಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News