ಇನಾಂ ಜಮೀನುಗಳ ಮರು ಮಂಜೂರಾತಿಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶ: ಸಚಿವ ಆರ್.ಅಶೋಕ್

Update: 2022-01-19 12:35 GMT

ಬೆಂಗಳೂರು, ಜ. 19: ರಾಜ್ಯದಲ್ಲಿ `ಇನಾಂ ಜಮೀನು'ಗಳ ಮರು ಮಂಜೂರಾತಿ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದ್ದಾರೆ.

`ಇನಾಂ ಜಮೀನುಗಳ ಮರು ಮಂಜೂರಾತಿ ಸಂಬಂಧ ಅರ್ಜಿ ಸಲ್ಲಿಸುವ ಅವಧಿ 2021ರ ಡಿಸೆಂಬರ್‍ಗೆ ಮುಕ್ತಾಯವಾಗಿತ್ತು. ಈ ಸಂಬಂಧ ಡಿಸಂಬರ್‍ನಲ್ಲಿ ನಡೆದ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಸಂಬಂಧಿತ ತಿದ್ದುಪಡಿ ವಿಧೇಯಕ ಮಂಡಿಸಿದ್ದರು. ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿರುವುದರಿಂದ ಕಾಯ್ದೆ ಜಾರಿಗೆ ಬಂದಿದ್ದು, ಇದರಿಂದಾಗಿ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಏನಿದು ಮರು ಮಂಜೂರಾತಿ ಅರ್ಜಿ: ರಾಜ್ಯದಲ್ಲಿ ಸುಮಾರು 70 ಸಾವಿರ ಎಕರೆ ಇನಾಂ ಜಮೀನು ಇದೆ. ಈ ಹಿಂದೆ ರಾಜ ಮಹಾರಾಜರು ಹಾಗೂ ಬ್ರಿಟಿಷ್ ಕಾಲದಲ್ಲಿ 100 ರಿಂದ ಸಾವಿರ ಎಕರೆ ಪ್ರದೇಶವನ್ನು ಹಲವರಿಗೆ ಇನಾಂ ರೂಪದಲ್ಲಿ ನೀಡಲಾಗಿತ್ತು. ಈ ಜಮೀನಿನಲ್ಲಿ ಕಾಲಕ್ರಮೇಣ ರೈತರು ಬೇಸಾಯ ಮಾಡುತ್ತಿದ್ದರು. ಇನಾಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪಹಣಿ ಕೊಡುವ ಕೆಲಸ ಸರಕಾರದಿಂದ ನಡೆಯುತ್ತಿತ್ತು.

ಸೂಕ್ತ ತಿಳುವಳಿಕೆಯ ಕೊರತೆಯಿಂದ ಲಕ್ಷಾಂತರ ರೈತರು ಅರ್ಜಿ ಸಲ್ಲಿಸದೆ ಸಮಸ್ಯೆಗೆ ಒಳಗಾಗಿದ್ದರು. ಈ ಬಗ್ಗೆ ಚಿಂತನೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ರೈತರಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಸಮಿತಿ ವರದಿ ನೀಡಿತ್ತು, ಅದರಂತೆ ತಿದ್ದುಪಡಿ ವಿಧೇಯಕ ಮಂಡಿಸಲಾಗಿದ್ದು, ಈಗ ಕಾನೂನು ಜಾರಿಯಾಗಿದೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News