ಕೋವಿಡ್ ಭೀತಿ: ಮುಚ್ಚಲ್ಪಟ್ಟ ಶಾಲೆಗಳನ್ನು ತೆರೆಯಲು ಜ.21ರ ತಜ್ಞರ ಸಭೆಯಲ್ಲಿ ತೀರ್ಮಾನ; ಸಚಿವ ಬಿ.ಸಿ.ನಾಗೇಶ್

Update: 2022-01-19 13:55 GMT

ಬೆಂಗಳೂರು, ಜ. 19: `ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ದೃಢ ಪ್ರಮಾಣ ಹೆಚ್ಚಿರುವುದರಿಂದ ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಮುಚ್ಚಲ್ಪಟ್ಟಿದ್ದ ಶಾಲೆಗಳನ್ನು ಪುನರಾರಂಭಿಸುವ ಕುರಿತು ಶುಕ್ರವಾರ(ಜ.21) ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಶಾಸಕರ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕೋವಿಡ್ ಸೋಂಕು ಕೆಲ ದಿನಗಳ ಹಿಂದೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಸೋಂಕು ಹರಡಬಹುದೆಂಬ ಕಾರಣಕ್ಕೆ ಸರಕಾರ ಶಾಲೆ ಮುಚ್ಚುವ ತೀರ್ಮಾನ ಮಾಡಿತ್ತು. ಇದೀಗ ಶಾಲೆಗಳನ್ನು ಪುನರಾರಂಭಿಸುವ ಸಿಎಂ ಸಭೆ ನಡೆಸಲಿದ್ದು, ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು' ಎಂದರು.

`ಶಾಲೆಗಳನ್ನು ಮುಚ್ಚಬೇಕೆಂದು ತಾಂತ್ರಿಕ ಸಲಹಾ ಸಮಿತಿ ಅಥವಾ ತಜ್ಞರು ಸೂಚಿಸಿರಲಿಲ್ಲ. ಆದರೆ, ಮೂರನೇ ಅಲೆಯಲ್ಲಿ ಸೋಂಕು ಒಬ್ಬರಿಂದ ಒಬ್ಬರಿಗೆ ಬಹು ವೇಗವಾಗಿ ಹಬ್ಬುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದರು. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಕಾರಣ ಶಾಲೆ ಬಂದ್ ಮಾಡುವ ತೀರ್ಮಾನವನ್ನು ಕೈಗೊಂಡಿದ್ದೇವೆ' ಎಂದು ಅವರು ವಿವರಣೆ ನೀಡಿದರು.

`ಶಾಲೆಗಳನ್ನು ಮುಚ್ಚದಂತೆ ಖಾಸಗಿ ಶಾಲಾ ಒಕ್ಕೂಟದವರು ಮನವಿ ಮಾಡಿದ್ದಾರೆ. ಈಗ ಯಾವ ಯಾವ ಶಾಲೆಗಳಲ್ಲಿ ಎಷ್ಟೆಷ್ಟು ಪಾಸಿಟಿವ್ ಬಂದಿದೆ ಎಂಬುದನ್ನು ನಾವು ಅಧ್ಯಯನ ಮಾಡಿದ್ದೇವೆ. ಹೆಚ್ಚು ಸೋಂಕು ಇರುವ ಶಾಲೆಗಳನ್ನು ಬಂದ್ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇವೆ. ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಶಾಲೆಗಳನ್ನು ಸದ್ಯಕ್ಕೆ ಬಂದ್ ಮಾಡಲಾಗಿದೆ. ಉಳಿದಿರುವ ಕಡೆ ಎಂದಿನಂತೆ ಶಾಲೆಗಳು ನಡೆಯುತ್ತಿವೆ. ಕೋವಿಡ್ ಪರಿಸ್ಥಿತಿ ಆಧರಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು' ಎಂದರು.

`ಸದ್ಯಕ್ಕೆ ಮುಚ್ಚಲ್ಪಟ್ಟಿರುವ ಜಿಲ್ಲೆಗಳಲ್ಲಿ ಶಾಲೆಗಳ ಪುನಾರಂಭಿಸಲು ಚಿಂತನೆ ನಡೆಸಿದ್ದೇವೆ. 5ನೆ ತರಗತಿ ಮೇಲ್ಪಟ್ಟು ಶಾಲೆಗಳನ್ನು ತೆರೆಯಲು ಗಂಭೀರ ಚಿಂತನೆ ನಡೆದಿದೆ. ಅಂತಿಮವಾಗಿ ಶುಕ್ರವಾರದ ಸಭೆ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಕ್ಲಸ್ಟರ್ ಮಟ್ಟದಲ್ಲಿ ಶಾಲೆ ಬಂದ್ ಮಾಡಲು ಸಲಹೆ ಬಂದಿದೆ. ನಾವು ಏಕಾಏಕಿ ಶಾಲೆ ಬಂದ್ ಮಾಡಲು ಸಾಧ್ಯವಿಲ್ಲ. ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿ, ಆರೋಗ್ಯ, ಪೋಷಕರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಮಾಡಲಾಗುವುದು' ಎಂದು ಬಿ.ಸಿ.ನಾಗೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News