ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಕುಶಾಲನಗರ ಉಪ ತಹಶೀಲ್ದಾರ್

Update: 2022-01-19 14:31 GMT
ಕುಶಾಲನಗರ ತಾಲೂಕು ಕಚೇರಿ

ಮಡಿಕೇರಿ ಜ.19 : ಕಾಫಿ ಬೆಳೆಗಾರರೊಬ್ಬರ 3 ಎಕರೆ ತೋಟದ ದಾಖಲೆ ದುರಸ್ಥಿ ಹಾಗೂ 2 ಎಕರೆ ಜಾಗ ಮಂಜೂರಾತಿಗಾಗಿ ಒಟ್ಟು 14.50 ಲಕ್ಷ ರೂ.ಗಳಿಗೆ ಬೇಡಿಕೆ ಮುಂದಿಟ್ಟು, 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಕುಶಾಲನಗರ ತಾಲೂಕು ಕಚೇರಿಯ ಉಪ ತಹಶೀಲ್ದಾರ್ ವಿನು ಎಂಬವರನ್ನು ಭಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಆರೋಪಿಯಿಂದ 50 ಸಾವಿರ ರೂ. ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.

ಅಂದಗೋವೆ ನಿವಾಸಿ ಬೆಳ್ಳಿಯಪ್ಪ ಎಂಬವರು ಸರ್ವೆ ನಂಬರ್ 177/10ಪಿ1ರಲ್ಲಿ 3 ಎಕರೆ ಜಾಗ ಹೊಂದಿದ್ದರು. ಈ ಜಮೀನಿನ ದಾಖಲೆ ದುರಸ್ಥಿ ಮಾಡಿಕೊಡುವಂತೆ ಸುಂಟಿಕೊಪ್ಪ ನಾಡ ಕಚೇರಿಗೆ 2021ರ ಆಗಸ್ಟ್ 10ರಂದು ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಅರ್ಜಿ ಕುಶಾಲನಗರ ಉಪ ತಹಶೀಲ್ದಾರ್ ಕಚೇರಿಗೆ ರವಾನೆಯಾಗಿತ್ತು. 

ಈ ನಡುವೆ ಜ.17ರಂದು ಕುಶಾಲನಗರ ಉಪ ತಹಶೀಲ್ದಾರ್ ವಿನು ಎಂಬವರು ಅರ್ಜಿದಾರರಾದ ಬೆಳ್ಳಿಯಪ್ಪ ಮತ್ತು ಅವರ ಪತ್ನಿಯನ್ನು ನಾಡ ಕಚೇರಿಗೆ ಬರ ಹೇಳಿದ್ದರು. ಈ ವೇಳೆ 3 ಜಮೀನು ದುರಸ್ಥಿಗೆ ಎಕರೆಗೆ ತಲಾ 2.50 ಲಕ್ಷ ರೂ. ಹಾಗೂ 2 ಎಕರೆ ಒತ್ತುವರಿ ಭೂಮಿ ಮಂಜೂರು ಮಾಡಲು ಎಕರೆಗೆ ತಲಾ 3.50 ಲಕ್ಷ ರೂ.ನಂತೆ ಒಟ್ಟು 14.50 ಲಕ್ಷ ರೂ.ಗಳನ್ನು ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಒಟ್ಟು ಹಣದಲ್ಲಿ 3.50 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡುವಂತೆ ತಿಳಿಸಿದ್ದರು. ಈ ಕುರಿತು ಬೆಳ್ಳಿಯಪ್ಪ ಅವರು ಮಡಿಕೇರಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ತಂತ್ರಗಾರಿಕೆ ನಡೆಸಿದ್ದರು.

ಅದರಂತೆ ಜ.19ರಂದು ಕುಶಾಲನಗರ ತಾಲೂಕು ಕಚೇರಿಗೆ ಹೊಂದಿಕೊಂಡಂತಿರುವ ಕ್ಯಾಂಟೀನ್ ಒಂದರಲ್ಲಿ ಅರ್ಜಿದಾರ ಬೆಳ್ಳಿಯಪ್ಪ ಎಂಬವರಿಂದ 50 ಸಾವಿರ ರೂ. ಹಣವನ್ನು ಲಂಚದ ರೂಪದಲ್ಲಿ ಸ್ವೀಕರಿಸುವ ಸಂದರ್ಭ ಮಡಿಕೇರಿಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಹಣ ಸಹಿತ ಉಪ ತಹಶೀಲ್ದಾರ್ ವಿನು ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 50 ಸಾವಿರ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಉಪ ತಹಶೀಲ್ದಾರ್‍ ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News