ಬಿಇಎಂಎಲ್ ಖಾಸಗೀಕರಣ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

Update: 2022-01-19 15:26 GMT

ಬೆಂಗಳೂರು, ಜ.19: ಕೇಂದ್ರ ಸರಕಾರದ ಒಡೆತನದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಖಾಸಗೀಕರಣಗೊಳಿಸುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಸರಕಾರ ಹಾಗೂ ಬಿಇಎಂಎಲ್‍ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಬಿಇಎಂಎಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ರುದ್ರಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರುತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ  ಪ್ರೊ.ರವಿವರ್ಮ ಕುಮಾರ್, ರಕ್ಷಣಾ ವಲಯದ ಅತ್ಯಂತ ಪ್ರಮುಖ ಉದ್ದಿಮೆಯಾದ ಬಿಇಎಂಎಲ್‍ನ್ನು ಖಾಸಗೀಕರಣಗೊಳಿಸುವ ಕ್ರಮ ಸರಿಯಾದದ್ದಲ್ಲ. ಹಾಗಿದ್ದೂ, ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.
ಆಸಕ್ತ ಬಿಡ್ಡರ್‍ಗಳ ಮೌಲ್ಯಮಾಪನ ನಡೆಸಲಾಗುತ್ತಿದೆ. ಖಾಸಗೀಕರಣ ಪ್ರಕ್ರಿಯೆ ಕೈಬಿಡುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.

ಅಲ್ಲದೇ, ರಕ್ಷಣಾ ವಲಯದ ಉದ್ದಿಮೆಯಾದ್ದರಿಂದ ಖಾಸಗೀಕರಣಗೊಳಿಸುವುದು ಸರಿಯಲ್ಲ. ಹೀಗಾಗಿ, ಖಾಸಗೀಕರಣ ಪ್ರಕ್ರಿಯೆಗೆ ನ್ಯಾಯಾಲಯ ಮಧ್ಯಂತರ ತಡೆ ನೀಡಬೇಕು. ಇಲ್ಲವೇ, ಖಾಸಗೀಕರಣ ಪ್ರಕ್ರಿಯೆಯು ಈ ಅರ್ಜಿ ಸಂಬಂಧ ನ್ಯಾಯಾಲಯ ನೀಡಲಿರುವ ಅಂತಿಮ ತೀರ್ಪಿಗೆ ಒಳಪಡಲಿದೆ ಎಂದಾದರೂ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News