''ಕೊರೋನ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತ ಹುಡುಕಿಕೊಂಡು ಬರೋದಿಲ್ಲ'': ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಜ.19: ಕೊರೋನ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತ ಹುಡುಕಿಕೊಂಡು ಬರೋದಿಲ್ಲ. ಯಾರೂ ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೋ ಅಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಮೇಲೆ ಕೇಸ್ ಹಾಕಬೇಕು, ಬಿಡಬೇಕು ಎಂಬುದನ್ನು ಸಂಬಂಧಪಟ್ಟ ಇಲಾಖೆಯವರು ನೋಡ್ತಾರೆ. ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಎನ್ನುವುದಿಲ್ಲ. ಮೇಕೆದಾಟು ಯೋಜನೆ ಪಾದಯಾತ್ರೆಯಿಂದಲೇ ಕೋವಿಡ್ ಆರಂಭವಾಗಿದ್ದು. ಸಾವಿರಾರು ಜನ ಒಟ್ಟಿಗೆ ಸೇರಿ ಪಾದಯಾತ್ರೆ ನಡೆಸಿದ್ದರಿಂದ ಸಮಸ್ಯೆ ಆಯ್ತು. ಯಾರೂ ಮಾಸ್ಕ್ ಹಾಕಿಲ್ಲ, ಅವರೆಲ್ಲರ ಮೇಲೂ ಕೇಸ್ ಹಾಕಲಿ.
ಜನರಿಗೆ ತೊಂದರೆ ಆಗದಿರುವಂತಹ ದಿಕ್ಕಿನಲ್ಲಿ ಗಮನಿಸಲಿ. ನಾವು ತಪ್ಪು ಮಾಡಿದರೆ ನಮ್ಮ ಮೇಲೆಯೂ ಕೇಸ್ ಹಾಕಲಿ, ಯಾರೂ ಬೇಡ ಅಂತಾರೆ. ಇವತ್ತು ಎಲ್ಲಾ ಮಕ್ಕಳಿಗೂ ಕೋವಿಡ್ ಹರಡುತ್ತಿದೆ. ಕಾಂಗ್ರೆಸ್ ಬಿಜೆಪಿ ಮೇಲೆ, ಬಿಜೆಪಿ ಕಾಂಗ್ರೆಸ್ ಮೇಲೆ ಆಪಾದನೆ ಮಾಡುವ ಮೊದಲು ಎಲ್ಲರೂ ಜಾಗೃತರಾಗಿರಬೇಕು ಎಂದರು.