ಮಲೆನಾಡಿನ ರೈತರ ಭೂ ಹಕ್ಕಿಗಾಗಿ ಕಾನೂನು ಭಂಗ ಚಳುವಳಿ ಅನಿವಾರ್ಯ: ಸರ್ಕಾರಕ್ಕೆ ತಿ.ನಾ ಶ್ರೀನಿವಾಸ್ ಎಚ್ಚರಿಕೆ
ಶಿವಮೊಗ್ಗ , ಜ.19: ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಭೂಮಿಯನ್ನು ನೀಡಿದ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸಲು ವಿಫಲವಾಗಿರುವ ಸರ್ಕಾರಗಳ ವಿರುದ್ದ ಕಾನೂನು ಭಂಗ ಚಳುವಳಿ ನಡೆಸುವುದು ಅನಿವಾರ್ಯ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯಕ್ಕೆ ಬೆಳಕು ನೀಡಲು ತ್ಯಾಗ ಮಾಡಿದ ಶರಾವತಿ ಮುಳುಗಡೆ ಸಂತ್ರಸ್ತರ ಸುಮಾರು 25000 ಕುಟುಂಬದ ರೈತರಿಗೆ ಕಳೆದ 61 ವರ್ಷಗಳಿಂದ ವಾಸದಮನೆ, ಸಾಗುವಳಿ ಮಾಡಿದ ಭೂಮಿಗೆ ಇನ್ನೂ ಹಕ್ಕುಪತ್ರ ನೀಡಿಲ್ಲ. 1959ರಿಂದ 64 ರವರೆಗೆ ಅರಣ್ಯ ಇಲಾಖೆ 32 ಸರ್ಕಾರಿ ಆದೇಶಗಳ ಮೂಲಕ ಅರಣ್ಯ ಜಮೀನು ಬಿಡುಗಡೆ ಮಾಡಿದ್ದರೂ ರೈತರಿಗೆ ಹಕ್ಕುಪತ್ರ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಕಾಗೋಡು ತಿಮ್ಮಪ್ಪರವರು ಕಂದಾಯ ಮಂತ್ರಿಯಾಗಿದ್ದಾಗ ಮದನ್ ಗೋಪಾಲ್ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾಗಿದ್ದಾಗ 9200 ಎಕರೆ ಅರಣ್ಯ ಜಮೀನು ಕಂದಾಯ ಇಲಾಖೆಗೆ ಹಸ್ತಂತರಿಸಿದರೂ ಇಲಾಖೆ ನ್ಯಾಯಾಲಯಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡದೇ ಇದ್ದಿದ್ದರಿಂದ, ನ್ಯಾಯಾಲಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. ರೈತರಿಗೆ ಹಕ್ಕುಪತ್ರ ಕೊಡುವ ಕಾರ್ಯ ಅಲ್ಲಿಗೆ ನಿಂತಿದೆ. ಹಕ್ಕುಪತ್ರ ಪಡೆದ ಕುಟುಂಬಗಳು ದಿಕ್ಕು ತೋಚದಂತಾಗಿದೆ. ಇದೇ ಸೆಪ್ಟೆಂಬರ್ 23ರಂದು ಮುಖ್ಯಮಂತ್ರಿ ಸಭೆ ನಡೆಸಿದ್ದು 3 ತಿಂಗಳಾದರೂ ಸಭೆ ನಿರ್ಣಯವನ್ನೇ ಇನ್ನೂ ಬರೆದಿಲ್ಲ. ಇದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯವಾಸಿಗಳು ಸಾಗುವಳಿ ಮಾಡಿದ ಅರಣ್ಯ ಜಮೀನನ್ನು ಮಂಜೂರು ಮಾಡಲು 2008ರಲ್ಲಿ ತಂದ ಕಾಯ್ದೆ ರಾಜ್ಯ-ಕೇಂದ್ರ ಸರ್ಕಾರಗಳು ಕಸದ ಬುಟ್ಟಿಗೆ ಹಾಕಿದೆ. 2019ರಲ್ಲಿ ಸುಪ್ರೀಂಕೋರ್ಟ್ ಅರಣ್ಯ ಹಕ್ಕು ಸಮಿತಿಯಲ್ಲಿ ವಜಾ ಆದ ಅರ್ಜಿದಾರರನ್ನು ಒಕ್ಕಲೆಬ್ಬಿಸಲು ಆದೇಶಿಸಿದೆ. ಸರ್ಕಾರಗಳು ರೈತರು ಮೇಲ್ಮನವಿ ಸಲ್ಲಿಸಿದಾಗ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲಿಸಿ, ನೈಸರ್ಗಿಕ ನ್ಯಾಯ ಕೊಡಿ, ದಾಖಲೆ ಸಲ್ಲಿಸಲು ಅರ್ಜಿದಾರರಿಗೆ ಸಹಾಯ ಮಾಡಿ ಎಂದು ಆದೇಶಿಸಿದೆ. ರಾಜ್ಯ ಸರ್ಕಾರ ಜನವರಿ 21ರೊಳಗೆ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಇತ್ಯರ್ಥಗೊಳಿಸುವುದಾಗಿ ನ್ಯಾಯಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿತು. ಈ ಅವಧಿ 18 ತಿಂಗಳು ಸರ್ಕಾರ ನಿದ್ರೆಯಲ್ಲಿತ್ತು. ಈಗ ಉಪವಿಭಾಗ ಮಟ್ಟದ ಸಮಿತಿ ಅಧ್ಯಕ್ಷರಾದ ಸಾಗರ-ಶಿವಮೊಗ್ಗ ಎ.ಸಿ.ಯವರು 1930ರ ಅನುಭವದ ದಾಖಲೆ ಕೇಳಿದ್ದಾರೆ. ನೋಟೀಸು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಹಿಂದೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿ ಮಲಂದೂರಿನಲ್ಲಿ ನಕ್ಸಲ್ ಪೀಡಿತ ಪ್ರದೇಶ ಎಂಬ ಕಾರಣದಿಂದ ರಾತ್ರಿ ಬೆಳಗಾಗುವುದರೊಳಗೆ 74 ಜನರಿಗೆ ಹಕ್ಕುಪತ್ರ ನೀಡಲಾಯಿತು. ಅದೇಮಾದರಿ ಜಿಲ್ಲೆಯ ಎಲ್ಲಾ ಗ್ರಾಮದ ಜನರಿಗೆ ಹಕ್ಕುಪತ್ರ ನೀಡಿ ಎಂದು ನೂರು ಬಾರಿ ಮನವಿ ಮಾಡಿದರೂ ಹಕ್ಕು ಪತ್ರ ನೀಡುತ್ತಿಲ್ಲ. ಆ ಸಂದರ್ಭದಲ್ಲಿ ಅರಣ್ಯ, ರೆವಿನ್ಯೂ ಅಧಿಕಾರಿಗಳು ಸಾಂದರ್ಭಿಕ ಸಾಕ್ಷ್ಯ ಆಧಾರದ ಮೇಲೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ 2 ಸಾವಿರ ಜನ ಭೂ ಹಕ್ಕಿಗಾಗಿ ಪರಿತಪಿಸುತ್ತಿದ್ದಾರೆ.ಮುಖ್ಯಮಂತ್ರಿಯವರು ಸಭೆ ನಡೆಸಿ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿಗಾಗಿ ಸಲ್ಲಿಸಿರುವವರು 75 ವರ್ಷದ ಅನುಭವ ನಿಯಮದಲ್ಲಿ ತಿದ್ದುಪಡಿ ತಂದು 25 ವರ್ಷಕ್ಕೆ ಇಳಿಸಲು ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದೆಂದು ಸಭೆ ನಡೆಸಿ ತೀರ್ಮಾನಿಸಿದ್ದಾರೆ.ಈ ಸಭೆಯಲ್ಲಿ ಹಾಜರಿದ್ದ ಸಂಸದ ರಾಘವೇಂದ್ರ ರವರು ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.ಅವರದೇ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷವಾದ ನಂತರ ಸಂಸದ ರಾಘವೇಂದ್ರ ಅವರು ಜಿಲ್ಲೆಯ ಬಗರ್‌ಹುಕುಂ ರೈತರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅಧಿಕಾರಿಗಳು 72 ಸಾವಿರ ರೈತರ ಅರ್ಜಿಯನ್ನು ವಜಾಗೊಳಿಸುತ್ತಿದ್ದಾರೆ.ಜನ ಮೇಲ್ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಛೇರಿಗೆ ಮತ್ತು ಹೈಕೋರ್ಟ್‌ಗೆ ತಿರುಗಾಡಬೇಕಾಗಿದೆ. ಈ ಹಂತಗಳಲ್ಲಿ ಅರ್ಜಿ ವಜಾ ಆದರೆ ಒಕ್ಕಲೆಬ್ಬಿಸುವ ಕ್ರಮಕ್ಕೆ ಗುರಿಯಾಗಬೇಕಾಗಿದೆ. ಕೇಂದ್ರ ಸರ್ಕಾರ ಕೂಡಲೇ 75 ವರ್ಷದ ಅನುಭವ ಬದಲು 25 ವರ್ಷದ ಅನುಭವ ನಿಗಧಿಪಡಿಸಿ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ 1995-96ರಲ್ಲಿ 1978ರೊಳಗೆ ಅರಣ್ಯ ಭೂಮಿ ಸಾಗುವಳಿ ಮಾಡಿದ ಸಣ್ಣ ರೈತರಿಗೆ ಭೂರಹಿತರಿಗೆ, ಪರಿಶಿಷ್ಟ ಜಾತಿ ವರ್ಗದವರಿಗೆ 3 ಎಕರೆ ಜಮೀನು ಮಂಜೂರು ಮಾಡಲು ಆದೇಶ ಮಾಡಿದೆ. ಕೇಂದ್ರ ಸರ್ಕಾರ ಈ ಉದ್ದೇಶಕ್ಕಾಗಿ 14,900 ಹೆಕ್ಟರ್ ಜಾಗವನ್ನು ಮಂಜೂರು ಮಾಡಿದೆ. ನಮ್ಮ ಜಿಲ್ಲೆಯ 4,300 ರೈತರ ಹೆಸರನ್ನು ಅರಣ್ಯ ಇಲಾಖೆ ಜಮೀನು ಮಂಜೂರು ಮಾಡಲು ಕಳಿಸಿ 25 ವರ್ಷ ಕಳೆದಿವೆ. ಜಿಲ್ಲೆಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಕ್ಷೇತ್ರದಲ್ಲೇ 1602 ಜನರ ಹೆಸರು ಪಟ್ಟಿಯಲ್ಲಿವೆ. ಸರ್ಕಾರದ ಆದೇಶವಿದ್ದರೂ ಒಬ್ಬರಿಗೂ ಭೂಮಿ ಬಿಡುಗಡೆ ಮಾಡಿಲ್ಲ. ಮಲೆನಾಡಿನ ಜನರ ವಿರೋಧಿಯಾದ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕೆಂದು ಪಾದಯಾತ್ರೆ ಮೂಲಕ ಜನ ಪ್ರತಿಭಟಿಸಿದ್ದಾರೆ. ರಾಜ್ಯ-ಕೇಂದ್ರ ಸರ್ಕಾರ ನಾಟಕವಾಡುತ್ತಿದೆ.
ಜಿಲ್ಲೆಯಲ್ಲಿ ಹಕ್ಕುಪತ್ರ ಪಡೆದಿರುವ ಸಾವಿರಾರು ರೈತರ ಜಮೀನನ್ನು 1890, 1905ರ ಮಹಾರಾಜರ ಬ್ರಿಟಿಷರ ಕಾಲದ ಆದೇಶ ಎಂದು ಅರಣ್ಯ ಜಮೀನು ಎಂದು ದಾಖಲು ಮಾಡಿರುವುದನ್ನು ರದ್ದುಗೊಳಿಸಬೇಕು, ಸೊಪ್ಪಿನ ಬೆಟ್ಟ, ಕಾನು, ಇವುಗಳನ್ನು ಪರಿಭಾವಿತ ಅರಣ್ಯ ಎಂದು ಘೋಷಿಸಿದ್ದನ್ನು ರದ್ದುಗೊಳಿಸಬೇಕು. ಫಾರಂ ನಂ. 57ರಲ್ಲಿ ಜಿಲ್ಲೆಯಲ್ಲಿ 1 ಲಕ್ಷ ರೈತರು ಬಗರ್ ಹುಕುಂ ಸಾಗುವಳಿ ಜಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.ಕೂಡಲೇ ಜಮೀನು ಮಂಜೂರು ಮಾಡುವ ಕಾರ್ಯ ಆರಂಭಿಸಬೇಕು.ಹೀಗೆ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಈ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಜನ ಕಾನೂನು ಭಂಗ ಚಳುವಳಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ತೀ ನ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.