×
Ad

ಸಿಮ್ಸ್ ನಿರ್ದೇಶಕರ ನೇಮಕಾತಿ, ಪ್ರಾಂಶುಪಾಲರ ಹುದ್ದೆ ಸಂದರ್ಶನದಲ್ಲಿ ಅವ್ಯವಹಾರ: ಕೆ.ಬಿ.ಪ್ರಸನ್ನಕುಮಾರ್ ಆರೋಪ

Update: 2022-01-19 23:29 IST

ಶಿವಮೊಗ್ಗ, ಜ.19: ಸಿಮ್ಸ್ ನಿರ್ದೇಶಕರ ನೇಮಕಾತಿ, ಅಧ್ಯಾಪಕರ ಹಾಗೂ ಪ್ರಾಂಶುಪಾಲರ ಹುದ್ದೆ ಸಂದರ್ಶನದಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು ಸರ್ಕಾರ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ತಿಂಗಳಲ್ಲಿ 17 ಜನ ಸಹಾಯಕ ಪ್ರಾಧ್ಯಾಪಕರು ಹಾಗೂ 8 ವೈದ್ಯರ ನೇಮಕಾತಿಗೆ ಸಂಬಂಧಪಟ್ಟಂತೆ ಸಂದರ್ಶನ ನಡೆಸಲಾಗಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅಪಾದಿಸಿದರು

ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಮೆಗ್ಗಾನ್‌ನಲ್ಲಿ ಸುಮಾರು 4,500 ಕೋವಿಡ್ ರೋಗಿಗಳು ದಾಖಲಾಗಿದ್ದು ಇದರಲ್ಲಿ ಸುಮಾರು 1,400 ಜನರು ಮೃತಪಟ್ಟಿದ್ದಾರೆಂದು ಅವರೇ ಅಂಕಿಅಂಶಗಳನ್ನು ನೀಡುತ್ತಾರೆ. ಈ ಸಂಖ್ಯೆ ದುಪ್ಪಟ್ಟಾಗಿರುವ ಸಾಧ್ಯತೆಯಿದೆ. ಮೆಗ್ಗಾನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ವೈದ್ಯರು ಕೇವಲ ಹಾಜರಿ ಹಾಕಿ ಖಾಸಗಿ ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕರ್ತವ್ಯದಲ್ಲಿ ಅಸಡ್ಡೆ ತೋರಿದ ಪರಿಣಾಮ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪಿಸಿದರು. 3ನೇ ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ವಿಶೇಷ ಆಸಕ್ತಿಯಿಂದ ನಿರ್ಮಾಣವಾದ ಮೆಗ್ಗಾನ್ ಆಸ್ಪತ್ರೆ ಹಿಂದಿನಿಂದಲೂ ಉತ್ತಮ ಸೇವೆಗೆ ಹೆಸರುವಾಸಿ. ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳು ಆಸ್ಪತ್ರೆಗೆ ಕೆಟ್ಟಹೆಸರು ತರುತ್ತಿದ್ದು ಇದಕ್ಕೆ ಸಿಮ್ಸ್ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ಯಾಮ್‌ಸುಂದರ್, ಮಂಜುನಾಥ್, ರಘು, ಸುವರ್ಣ ನಾಗರಾಜ್, ಅಕ್ರಮ್ ಮತ್ತಿತರರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News