ಸಿಎಂ ಬೊಮ್ಮಾಯಿ ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಿಲ್ಲ: ಸಚಿವ ಮುರುಗೇಶ್ ನಿರಾಣಿ
Update: 2022-01-20 00:04 IST
ಬೆಂಗಳೂರು: ''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ '' ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಯಾವ ಕಾರಣಕ್ಕೂ ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ, ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳು ಖಾಲಿ ಇದ್ದು, ಅದನ್ನು ಭರ್ತಿ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಳಿಗಿರುವುದರಿಂದ ವಿಶೇಷ ಸಂದರ್ಭದಲ್ಲಿ ಅವರು ಅದನ್ನು ಮಾಡುತ್ತಾರೆ'' ಎಂದು ತಿಳಿಸಿದರು.
''ನಾನು ಮತ್ತು ಬಸವರಾಜ ಬೊಮ್ಮಾಯಿ ಅವರು ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ, ಅಣ್ಣ ತಮ್ಮಂದಿರಂತೆ ಇದ್ದೇವೆ. ನನ್ನ ಅವರ ಸಂಬಂಧ 30 ವರ್ಷಗಳಿಂದ ಇರುವುದರಿಂದ ಆ ರೀತಿಯ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ. ಅವರು ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಿರುವ ವಿಷಯ ಸತ್ಯಕ್ಕೆ ದೂರವಾದದ್ದು'' ಎಂದು ತಿಳಿಸಿದರು.