ಹೊಸದುರ್ಗದಲ್ಲಿ ಭುಗಿಲೆದ್ದ ಬಿಜೆಪಿ ನಾಯಕರ ಸಂಘರ್ಷ: ಶಾಸಕ ಗೂಳಿಹಟ್ಟಿ, ಲಿಂಗಮೂರ್ತಿ ಆರೋಪ-ಪ್ರತ್ಯಾರೋಪ
ಹೊಸದುರ್ಗ: ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಹಾಗೂ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ನಡುವಿನ ಭಿನ್ನಮತದ ಸಂಘರ್ಷ ತಾರಕಕ್ಕೇರಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಹೊಸದುರ್ಗ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತ ಎಂದು ಎಸ್.ಲಿಂಗಮೂರ್ತಿ ಹಾಗೂ ಗೂಳಿಹಟ್ಟಿ ಡಿ.ಶೇಖರ್ ಈ ಇಬ್ಬರೂ ಬಿಜೆಪಿ ನಾಯಕರು ಕಳೆದ ವಾರ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಇಬ್ಬರ ನಡುವೆ ಮುಸುಕಿನ ಗುದ್ದಾಟ ಬಿಜೆಪಿ ಪಾಳಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
2023ರ ವಿಧಾನಸಭೆ ಚುನಾವಣೆ ಇನ್ನೂ 15ತಿಂಗಳು ಬಾಕಿ ಇರುವ ಮೊದಲೇ ಬಿಜೆಪಿಯವರೇ ಆದ ತಾಲೂಕಿನ ಇಬ್ಬರೂ ನಾಯಕರು ನೀಡಿದ್ದ ಹೇಳಿಕೆಯಿಂದ ಬಿಜೆಪಿಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ. ತಾಲೂಕಿನ ಇಬ್ಬರು ಬಿಜೆಪಿ ನಾಯಕರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಕಳೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಎದುರೇ ಬಯಲಾಗಿದ್ದು, ಇಷ್ಟು ಸಾಲದು ಎಂಬಂತೆ ಇಬ್ಬರ ನಡುವಿನ ಆರೋಪ, ಪ್ರತ್ಯಾರೋಪದ ಆಡಿಯೊ ಮತ್ತು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಗೂಳಿಹಟ್ಟಿ ಶೇಖರ್ ಹಾಗೂ ಲಿಂಗಮೂರ್ತಿಯವರ ಬೆಂಬಲಿಗರು ತಮ್ಮ ತಮ್ಮ ನಾಯಕರನ್ನು ಬೆಂಬಲಿಸಿ ಪೋಸ್ಟರ್‌ಗಳನ್ನು ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಇಬ್ಬರ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಲಿಂಗಮೂರ್ತಿ ನಾನೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡರೆ, ಗೂಳಿಹಟ್ಟಿ ಡಿ.ಶೇಖರ್ ಶೇ. 100 ಬಿಜೆಪಿ ಟಿಕೆಟ್ ನನಗೆ ಸಿಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಬ್ಬರ ಸಂಘರ್ಷದಿಂದಾಗಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ.
ಲಿಂಗಮೂರ್ತಿಗೆ ತಾಕತ್ತಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ: ಗೂಳಿಹಟ್ಟಿ ಸವಾಲ್
ಲಿಂಗಮೂರ್ತಿ ಅವರಿಗೆ ತಾಕತ್ತಿದ್ದರೆ ಬಿ.ಎಸ್. ಯಡಿಯೂರಪ್ಪಮತ್ತು ವಿಜಯೇಂದ್ರ ಅವರ ಹೆಸರು ಹೇಳದೆ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ. ನಾನು ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತೇನೆ. ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಿ ಬಿಡೋಣ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ಎಸ್.ಲಿಂಗಮೂರ್ತಿ ಅವರಿಗೆ ಸವಾಲು ಹಾಕಿದ್ದಾರೆ.
ಕಾಲು ಕೆರೆದು ಜಗಳಕ್ಕೆ ಬರುವುದು ಬೇಡ: ಶಾಸಕ ಗೂಳಿಹಟ್ಟಿ ಶೇಖರ್‌ಗೆ ಲಿಂಗಮೂರ್ತಿ ಎಚ್ಚರಿಕೆ
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ಹತಾಶರಾಗಿದ್ದು ಸಾಕಷ್ಟು ನೋವಿನಲ್ಲಿದ್ದಾರೆ. ಅವರು ಕಾಲು ಕೆರೆದು ಜಗಳಕ್ಕೆ ಬರುವುದು ಬೇಡ. ಅನಗತ್ಯ ಜಗಳ ಮಾಡುವುದು ನಿಲ್ಲಿಸಬೇಕು. ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತನಾಡುವವರಿಗೆ ಕಾಲವೇ ಉತ್ತರ ಕೊಡಲಿದೆ. ಗೂಳಿಹಟ್ಟಿ ಶೇಖರ್ ಅವರ ಗೊಂದಲದ ಹೇಳಿಕೆಗಳಿಗೆ ಉತ್ತರ ಕೊಡುವ ಮೂರ್ಖ ನಾನಲ್ಲ ಎಂದು ಎಸ್.ಲಿಂಗಮೂರ್ತಿ ಅವರು ಗೂಳಿಹಟ್ಟಿ ಶೇಖರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸಂಘರ್ಷ ನಿಲ್ಲಿಸಿ, ಅಭಿವೃದ್ಧಿಗೆ ಒತ್ತು ಕೊಡಿ: ನಾಯಕರಿಗೆ ಕಾರ್ಯಕರ್ತರಿಂದ ಪಾಠ
ವಿಧಾನಸಭೆ ಚುನಾವಣೆ ಸ್ಪರ್ಧಿಸುವ ಬಗ್ಗೆ ಉಂಟಾಗಿರುವ ಸಂಘರ್ಷವನ್ನು ನಿಲ್ಲಿಸಿ ತಾಲೂಕಿನ ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡಬೇಕು ಎಂದು ಕಾರ್ಯಕರ್ತರು ಇಬ್ಬರೂ ನಾಯಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶೇಖರ್ ಮತ್ತು ಲಿಂಗಮೂರ್ತಿ ಇಬ್ಬರೂ ತಮ್ಮಳಗಿನ ಭಿನ್ನಮತವನ್ನು ಬದಿಗಿರಿಸಿ ತಾಲೂಕಿನ ಅಭಿವೃದ್ಧಿಗೆ ಗಮನಕೊಡಬೇಕು. ಚುನಾವಣೆ ಹತ್ತಿರ ಬಂದಾಗ ಟಿಕೆಟ್ ಕೊಡುವುದು ವರಿಷ್ಠರಿಗೆ ಬಿಟ್ಟ ವಿಷಯ. ಬಿಜೆಪಿ ವರಿಷ್ಠರು ಮುಸುಕಿನ ಗುದ್ದಾಟದಲ್ಲಿ ತೊಡಗಿರುವ ತಾಲೂಕಿನ ಇಬ್ಬರೂ ನಾಯಕರನ್ನು ಕರೆಯಿಸಿ ಸಂಘರ್ಷ ಶಮನಕ್ಕೆ ನಾಂದಿಯಾಡಬೇಕು ಎಂದು ಪಕ್ಷದ ಕಾರ್ಯಕರ್ತರು ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳನ್ನು ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚುನಾವಣೆ ಬಂದಾಗ ಗೆಲ್ಲುವ ವ್ಯಕ್ತಿಗೆ ಪಕ್ಷದ ವರಿಷ್ಠರು ಟಿಕೆಟ್ ಕೊಡುತ್ತಾರೆ.
ಗೂಳಿಹಟ್ಟಿ ಆರ್. ಜಗದೀಶ್, ಅಧ್ಯಕ್ಷರು ಬಿಜೆಪಿ ಮಂಡಲ ಹೊಸದುರ್ಗ