ಜ.27: ನವೀಕೃತ ಡೋನ್ ಬೋಸ್ಕೊ ಹಾಲ್ ಉದ್ಘಾಟನೆ

Update: 2022-01-20 05:53 GMT

ಮಂಗಳೂರು, ಜ.19: ನಗರದ ಅತ್ಯಂತ ಹಳೆಯ 7ದಶಕಗಳ ಹಿಂದೆ ನಾಟಕ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮ ಗಳ ಪ್ರದರ್ಶನಕ್ಕೆ ಕೇಂದ್ರವಾಗಿದ್ದ ಬಲ್ಮಠ ರಸ್ತೆಯಲ್ಲಿರುವ ಡೋನ್ ಬೋಸ್ಕೊ ಸಭಾಂಗಣ ನವೀಕರಣಗೊಡಿದ್ದು, ಜ.27ರಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಬಿಷಪ್ ಅ.ವಂ.ಡಾ.ಪೀಟರ್ ಪೌವ್ಲ್ ಸಲ್ದಾನ ಆಶೀರ್ವದಿಸಲಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಕೊಂಕಣಿ ನಾಟಕ ಸಭಾದ ಅಧ್ಯಕ್ಷ ವಂ.ಪಾವ್ ಮೆಲ್ವಿನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೊಂಕಣಿ ಹಾಡುಗಳು, ಸಂಗೀತ, ನೃತ್ಯ, ನಾಟಕ ಹಾಗೂ ಭಾಷಾ ಮಾಧ್ಯಮಗಳ ಮೂಲಕ ಕೊಂಕಣಿ ಸಂಸ್ಕೃತಿಯನ್ನು ಕಾಯ್ದುಕೊಂಡು, ಉಳಿಸಿಕೊಂಡು ಹೋಗುವುದು ಮತ್ತು ಈ ಮೂಲಕ ಮಾನವೀಯ ಮೌಲ್ಯಗಳನ್ನು ಪ್ರಚುರ ಪಡಿಸುವುದು ಕೊಂಕಣಿ ನಾಟಕ ಸಭಾ ಸಂಸ್ಥೆಯ ಉದ್ದೇಶ ಎಂದವರು ತಿಳಿಸಿದರು.

ಜಸ್ವಿಟ್ ವಂ.ಜಾರ್ಜ್ ಅಲ್ಬುಕರ್ಕ್ ಪೈ ಸ್ಥಾಪಿಸಿದ ಈ ಕೊಂಕಣಿ ನಾಟಕ ಸಭಾವನ್ನು ಮುಂದುವರಿಸಿ ಅದರ ಪಾಲನೆ ಪೋಷಣೆ ಮಾಡಿದ್ದು ಕಪುಚಿನ್ ಧರ್ಮಗುರು ಫಿಲಿಪ್. ಪ್ರಾರಂಭದ ದಿನಗಳಲ್ಲಿ ಕೊಂಕಣಿ ನಾಟಕ ಸಭಾದ ಸಮಾವೇಶ, ನಾಟಕ ಇತ್ಯಾದಿಗಳು ಮಿಲಾಗ್ರಿಸ್ ಶಾಲೆಯ ವಠಾರದಲ್ಲಿ ನಡೆಯುತ್ತಿದ್ದವು. ಇದೇ ವೇಳೆ ಕೊಂಕಣಿ ನಾಟಕ ಸಭಾದ ಸ್ವಂತ ಅವರಣಕ್ಕಾಗಿ ಹುಡುಕಾಟ ನಡೆದಿತ್ತು. ಹಂಪನಕಟ್ಟೆ ಬಳಿ ಬಲ್ಮಠ ರಸ್ತೆಯ ಬದಿ ಜಾಗವನ್ನು ಖರೀದಿಸಿ 1946 ರಲ್ಲಿ ಅದನ್ನು ನೋಂದಣಿ ಮಾಡಲಾಯಿತು. 1948 ಸೆ. 19ರಂದು ಕಪುಚಿನ್ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥ ವಂ.ರಿಚಾರ್ಡ್ ಹೊಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಕಷ್ಟವಾದರೂ ಜೆಸ್ಟಿಟ್ ವಂ.ಜಾರ್ಜ್ ಎ. ಹೈ ಮತ್ತು ಕಪುಚಿನ್ ವಂ.ಫಿಲಿಪ್ ನೆರಿ ಅವರು ಇದನ್ನು ಸವಾಲಾಗಿ ಸ್ವೀಕರಿಸಿ ವಿವಿಧ ದಾನಿಗಳಿಂದ ಹಣ ಸಂಗ್ರಹಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ ಗೊಳಿಸಿದರು. ಸಂತ ಡೋನ್ ಬೋಸ್ಕೊರನ್ನು ಕೊಂಕಣಿ ನಾಟಕ ಸಭಾದ ಪಾಲಕರಾಗಿ ಆಯ್ಕೆ ಮಾಡಿದರು. ಹಾಗಾಗಿ ಡೋನ್ ಬೋಸ್ಕೊ ಹಾಲ್ ಎಂಬ ಹೆಸರು ಬಂತು. 1950 ಆಗಸ್ಟ್ 19 ರಂದು ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಫಾ.ಜೂಲಿಯನ್ ಡಿಸೋಜ ಸಭಾಂಗಣವನ್ನು ಆಶೀರ್ವದಿಸಿದರು ಹಾಗೂ ಆಗಿನ ಜಿಲ್ಲಾ ಕಲೆಕ್ಟರ್ ರಾಜರತ್ನಂ ಉದ್ಘಾಟನೆ ನೆರವೇರಿಸಿದ್ದರು.

7 ದಶಕಗಳ ಇತಿಹಾಸ ಇರುವ ಈ ಸಭಾಂಗಣವನ್ನು ಇದೀಗ ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿದ್ದು, 600 ಪ್ರೇಕ್ಷಕರಿಗೆ ವೀಕ್ಷಣೆಗೆ ಅವಕಾಶ ಇರುವ ಥಿಯೇಟರ್ ಆಗಿ ಕಂಗೊಳಿಸುತ್ತಿದೆ. ನಾಟಕ, ಸಂಗೀತ, ನೃತ್ಯ ಇತ್ಯಾದಿ ಕಲಾವಿದರಿಗೆ ಕಲಾ ಪ್ರದರ್ಶನ ನೀಡಲು ಸಜ್ಜಾಗಿದೆ. ವಿವಿಧ ಕಲಾ ತರಬೇತಿ ಕಾರ್ಯಕ್ರಮ ನಡೆಸಲು ಕೂಡಾ ವ್ಯವಸ್ಥೆಗಳಿವೆ. 14 ವಿವಿಧ ಘಟಕಗಳ 272 ಕಲಾವಿದರು ಕೊಂಕಣಿ ನಾಟಕ ಸಭಾದಲ್ಲಿ ಸದಸ್ಯದ್ದು, ಒಂದು ಮಹಿಳಾ ಘಟಕ ಕೂಡಾ ಇದೆ ಎಂದು ವಂ.ಮೆಲ್ವಿನ್ ಡಿಸೋಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೊಂಕಣಿ ನಾಟಕ ಸಭಾದ ಉಪಾಧ್ಯಕ್ಷ ಲಿಸ್ಟನ್ ಡೆರಿಕ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಫ್ಲಾಯ್ಡಾ ಡಿಮೆಲ್ಲೊ, ಸಾರ್ವಜನಿಕ ಸಂಪರ್ಕಾಧಿಕಾರಿ ರೈಮಂಡ್ ಡಿಕುನ್ಹಾ, ಕೋಶಾಧಿಕಾರಿ ಜೆರಾಲ್ಡ್ ಕೊನ್ಸೆಸ್ಸೊ, ಸಹ ಕಾರ್ಯದರ್ಶಿ ಪ್ರವೀಣ್ ರೊಡ್ರಿಗಸ್, ಕಾರ್ಯಕಾರಿ ಸಮಿತಿ ಸದಸ್ಯ ಕ್ಲೀಟಸ್ ಲೋಬೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News