ಅಗ್ರಹಾರ ಕೃಷ್ಣಮೂರ್ತಿ ವಿರುದ್ಧ ಅಕಾಡಮಿ ಹಣ ದುರ್ಬಳಕೆ ಆರೋಪ: ಏಕಸದಸ್ಯ ನ್ಯಾಯಪೀಠದ ಆದೇಶ ಎತ್ತಿಹಿಡಿದ ಹೈಕೋರ್ಟ್

Update: 2022-01-21 10:27 GMT
                                                                  ಅಗ್ರಹಾರ ಕೃಷ್ಣಮೂರ್ತಿ 

ಬೆಂಗಳೂರು, ಜ.20: ಕೇಂದ್ರ ಸಾಹಿತ್ಯ ಅಕಾಡಮಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ, ಅಕಾಡಮಿ ಹಣದಲ್ಲಿ ದುಂದುವೆಚ್ಚ ಮಾಡಿದ್ದಾರೆ. ಅದರ 30 ಲಕ್ಷ ರೂ. ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು ಎಂಬ ಅಕಾಡಮಿಯ ಶಿಸ್ತು ಸಮಿತಿ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್‍ನ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವೂ ಎತ್ತಿ ಹಿಡಿದಿದೆ.

ಶಿಸ್ತು ಸಮಿತಿ ಆದೇಶ ಪ್ರಶ್ನಿಸಿ ಅಗ್ರಹಾರ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಪಿ.ಬಿ ಭಜಂತ್ರಿ ಅವರಿದ್ದ ಏಕಸದಸ್ಯ ಪೀಠ ಮಾನ್ಯ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ಸುಜಾತ ಹಾಗೂ ನ್ಯಾ.ರವಿ ಹೊಸಮನಿ ಅವರಿದ್ದ ವಿಭಾಗೀಯ ಪೀಠವು, ಸಾಹಿತಿ ಕಂಬಾರರ ಮೇಲ್ಮನವಿ ವಜಾಗೊಳಿಸಿ ಏಕಸದಸ್ಯ ಪೀಠದ ಆದೇಶ ಎತ್ತಿಹಿಡಿದಿದೆ.

ಪ್ರಕರಣವೇನು: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಕಾಡಮಿ ಕಾರ್ಯಕ್ರಮಗಳಿಗೆ ನಿಗದಿಗಿಂತಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ. ಹೊಸದಿಲ್ಲಿಯಲ್ಲಿ ಕಚೇರಿ ಹೊಂದಿದ್ದು, ಮೇಲಿಂದ ಮೇಲೆ ಬೆಂಗಳೂರಿಗೆ ಅಧಿಕೃತ ಪ್ರವಾಸ ಕೈಗೊಂಡು ಅಕಾಡಮಿಯ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿತ್ತು. 

ಈ ಕುರಿತಂತೆ ಶಿಸ್ತು ಸಮಿತಿ 2014ರ ಜೂನ್ 3ರಂದು 30 ಲಕ್ಷ ನಷ್ಟ ಭರ್ತಿ ಪಾವತಿಸುವಂತೆ ಕೃಷ್ಣಮೂರ್ತಿ ಅವರಿಗೆ ಆದೇಶಿಸಿತ್ತು. ಶಿಸ್ತು ಸಮಿತಿಯ ಆದೇಶ ಪ್ರಶ್ನಿಸಿ ಕೃಷ್ಣಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕದಸ್ಯ ಪೀಠ, ಶಿಸ್ತು ಸಮಿತಿ ಆದೇಶ ನೀಡುವ ಮುನ್ನ ನಡೆಸಿರುವ ವಿಚಾರಣಾ ಪ್ರಕ್ರಿಯೆ ಸರಿಯಿಲ್ಲ. ಹಾಗೆಯೇ ಬೈಲಾ ಪ್ರಕಾರ ನಿವೃತ್ತಿ ಹೊಂದಿದವರ ವಿರುದ್ಧ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಆದೇಶಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News