ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸದಿದ್ದರೆ ಹೋರಾಟ; ಡಿ.ಕೆ.ಶಿವಕುಮಾರ್

Update: 2022-01-20 18:29 GMT
ಡಿ.ಕೆ.ಶಿವಕುಮಾರ್

ಬೆಂಗಳೂರು, ಜ.20: ‘ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವಾಗಿ ನಾನು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಮ್ಮ ಪಕ್ಷದ ನಿಯೋಗ ಅವರನ್ನು ಭೇಟಿ ಮಾಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ನಿಯಮ ಉಲ್ಲಂಘನೆ ಸಂಬಂಧ ಅಧಿಕಾರಿಗಳು ಕೇವಲ ನಮ್ಮ ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಆಡಳಿತ ಪಕ್ಷದವರ ವಿರುದ್ಧ ಪ್ರಕರಣ ದಾಖಲಿಸದಿದ್ದರೆ, ನಾವು ಸುಮ್ಮನೆ ಕೂರುವುದಿಲ್ಲ. ನಾವು ಏನು ಹೋರಾಟ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

ಈ ವಿಚಾರವಾಗಿ ಸಿದ್ದರಾಮಯ್ಯ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರು ಮೈಸೂರಿನಲ್ಲಿ ಇದ್ದರು. ನಾನು ಕೂಡ ಊರಲ್ಲಿ ಇರಲಿಲ್ಲ. ಮುಖ್ಯಮಂತ್ರಿ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇವೆ. ಮುಖ್ಯ ಕಾರ್ಯದರ್ಶಿಗಳು ಕೂಡ ಕೋವಿಡ್ ನಿಯಮ ವಿರುದ್ಧವಾಗಿ ನಡೆದುಕೊಂಡ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಈ ಇಬ್ಬರೂ ಕ್ರಮಕ್ಕೆ ಆದೇಶಿಸಿದ್ದು, ಈಗ ಪ್ರಕರಣ ದಾಖಲಿಸುವುದು ಉಪ ಆಯುಕ್ತರುಗಳಿಗೆ ಬಿಟ್ಟ ವಿಚಾರ. ಅವರ ನಡೆ ನೋಡಿ, ಅವರ ವಿರುದ್ಧ ಹೇಗೆ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. 

ಕೇವಲ ಒಬ್ಬರ ಮೇಲೆ ಪ್ರಕರಣ ದಾಖಲಿಸುವುದಲ್ಲ. ನಿಯಮ ಉಲ್ಲಂಘಿಸಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ, ನಿಯಮ ಉಲ್ಲಂಘಿಸಿರುವವರ ಪಟ್ಟಿ ತರಿಸಿಕೊಂಡು, ಆಯಾ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಬಿಜೆಪಿಯಲ್ಲೇ ಕೋವಿಡ್ ನಿರ್ಬಂಧದ ಬಗ್ಗೆ ಗೊಂದಲ ಸೃಷ್ಟಿಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಜನರ ಪ್ರಾಣ ತೆಗೆಯುತ್ತಿದ್ದಾರೆ. ಬದುಕಿರುವವರನ್ನು ಸಾಯಿಸುತ್ತಿದ್ದಾರೆ. ವ್ಯಾಪಾರ, ವಹಿವಾಟು ಏನಾಗಬೇಕು? ವಿದೇಶಗಳಲ್ಲಿ ಯಾವುದೇ ನಿರ್ಬಂಧ ಬೇಡ ಎಂದು ತೀರ್ಮಾನಿಸಿದ್ದಾರೆ ಎಂದರು.

ನಾನು ಹೈದರಾಬಾದ್‍ಗೆ ಹೋಗಿದ್ದೆ, ಅಲ್ಲಿ ಯಾವುದೇ ನಿರ್ಬಂಧವಿಲ್ಲ. ಸರಕಾರ ಇಲ್ಲಿ ಯಾಕೆ ಜನಸಾಮಾನ್ಯರಿಗೆ ಈ ರೀತಿ ಸುಮ್ಮನೆ ತೊಂದರೆ ನೀಡುತ್ತಿದೆ? ಆರೋಗ್ಯದ ವಿಚಾರದಲ್ಲಿ ಅಗತ್ಯವಾದ ಕ್ರಮ ಕೈಗೊಳ್ಳಲಿ, ಆದರೆ ಅವರ ದಿನನಿತ್ಯದ ಬದುಕಿನ ಸಂಪಾದನೆ ಹಾಳು ಮಾಡುವುದೇಕೆ? ಎಂದು ಶಿವಕುಮಾರ್ ಕಿಡಿಗಾರಿದರು.

ಬ್ಯಾಂಕ್‍ನವರು ಅವರಿಗೆ ನೀಡಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುತ್ತಾರಾ? ಅಥವಾ ಸರಕಾರದವರು ಅವರ ಬಾಡಿಗೆಯನ್ನಾದರೂ ಮನ್ನಾ ಮಾಡುತ್ತಾರಾ? ವ್ಯಾಪಾರಸ್ಥರು, ಹೊಟೇಲ್ ಉದ್ಯಮದವರು ಏನಾಗಬೇಕು? ಹೊಟೇಲ್ ಕ್ಷೇತ್ರದವರು ಕೇಳುತ್ತಿರುವುದರಲ್ಲಿ ಅರ್ಥವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News