​ರಾಜ್ಯದಲ್ಲಿ ಕ್ಷಯ, ಕೋವಿಡ್ ಸಹ ಸೋಂಕಿನ 11 ಪ್ರಕರಣ ಪತ್ತೆ

Update: 2022-01-21 02:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಸೋಂಕಿನಿಂದ ಶ್ವಾಸಕೋಶಕ್ಕೆ ಹಾನಿಯಾಗಿ ಕ್ಷಯ ರೋಗದ ಸೋಂಕು ಕೂಡಾ ಸೇರ್ಪಡೆಯಾದ 288 ಪ್ರಕರಣಗಳು ಕೋವಿಡ್-19 ಎರಡನೇ ಅಲೆಯಲ್ಲಿ ವರದಿಯಾದ ಬಳಿಕ ಮೂರನೇ ಅಲೆಯಲ್ಲೂ ಇಂಥ 11 ಪ್ರಕರಣಗಳು ರಾಜ್ಯದಲ್ಲಿ ಈಗಾಗಲೇ ವರದಿಯಾಗಿವೆ. ಒಮೈಕ್ರಾನ್‌ನಲ್ಲಿ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆ ಕಡಿಮೆ ಎಂಬ ಮಾತು ಕೇಳಿಬರುತ್ತಿದ್ದರೂ, ಈ ಸಹ ಸೋಂಕು ಪ್ರಕರಣಗಳು ಆತಂಕ ಮೂಡಿಸಿವೆ.

ಮೂರನೇ ಅಲೆ ಆರಂಭದ ಬಳಿಕ ಸುಮಾರು ಒಂದು ತಿಂಗಳ ಅವಧಿಯಲ್ಲಿ 8885 ಕ್ಷಯ ರೋಗಿಗಳ ಪೈಕಿ 11 ಮಂದಿಗೆ ಕೋವಿಡ್-19 ಸೋಂಕು ಕೂಡಾ ಇರುವುದನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿದೆ. ಜನವರಿ 14ರಂದು ಸರ್ಕಾರ ಬಿಡುಗಡೆ ಮಾಡಿರುವ ಕ್ಲಿನಿಕಲ್ ನಿರ್ವಹಣೆ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಟಿಬಿ ಅತ್ಯಧಿಕ ಅಪಾಯ ಸಾಧ್ಯತೆಯ ಮಾನದಂಡವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೋವಿಡ್ ಸೋಂಕಿತರಲ್ಲಿ ಟಿಬಿ ಪತ್ತೆಗಾಗಿ ನಿರಂತರ ಎರಡರಿಂದ ಮೂರು ವಾರ ಕಾಲ ಕಫದ ಸಮಸ್ಯೆ ಇರುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ರಾಜ್ಯದಲ್ಲಿ ಈ ಅವಳಿ ಸೋಂಕಿನ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಎಲ್ಲ ಜಿಲ್ಲೆಗಳಿಗೆ ಸುತ್ತೋಲೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ರಮೇಶ್ ರೆಡ್ಡಿ ಈ ಬಗ್ಗೆ ವಿವರ ನೀಡಿ, "ಎರಡರಿಂದ ಮೂರು ವಾರ ಕಾಲ ನಿರಂತರ ಕಫದ ಸಮಸ್ಯೆ ಇರುವ ರೋಗಿಗಳನ್ನು ವಿಶೇಷ ತಪಾಸಣೆಗೆ ಒಳಪಡಿಸುವಂತೆ ಈಗಾಗಲೇ ದೂರವಾಣಿ ಮೂಲಕ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇಂದು ಈ ಸಂಬಂಧ ಅಧಿಕೃತ ಸೂಚನೆ ನೀಡಲಾಗಿದೆ. ಈ ಪ್ರಕರಣಗಳನ್ನು ’ಪ್ರಿಸಂಟಿವ್ ಟಿಬಿ’ ಪ್ರಕರಣಗಳಾಗಿ ನಾವು ಪರಿಗಣಿಸುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News