ತಮಿಳುನಾಡಿನ ಹೊಗೇನಕಲ್ ಎರಡನೇ ಹಂತದ ಯೋಜನೆಗೆ ಕರ್ನಾಟಕ ಆಕ್ಷೇಪ: ಸಚಿವ ಗೋವಿಂದ ಕಾರಜೋಳ

Update: 2022-01-21 12:24 GMT

ಬೆಂಗಳೂರು, ಜ. 21: ‘ತಮಿಳುನಾಡು ಸರಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ‘ಹೊಗೇನಕಲ್ ಎರಡನೆ ಹಂತದ ಯೋಜನೆ'ಗೆ ಕರ್ನಾಟಕ ರಾಜ್ಯ ಸರಕಾರದ ತೀವ್ರ ವಿರೋಧವಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ಆ ಯೋಜನೆಗೆ ಅವಕಾಶ ನೀಡುವುದಿಲ್ಲ' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರು ಹೊಗೇನಕಲ್ ಯೋಜನೆಯ ಎರಡನೆ ಹಂತವನ್ನು ಕೈಗೆತ್ತಿಕೊಳ್ಳಲು 4,600 ಕೋಟಿ ರೂ.ವೆಚ್ಚದ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವ ಸಂಬಂಧ ಪ್ರಕಟಿಸಿರುವುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ' ಎಂದು ತಿಳಿಸಿದರು.

‘ಕಾವೇರಿ ಕಣಿವೆಯಲ್ಲಿ ಕಾವೇರಿ ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿನ ನೀರಿನ ಹಂಚಿಕೆಗಳ ಅನ್ವಯವಾಗಿ ತಮಿಳುನಾಡು ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ, ಈ ಯೋಜನೆ ವಿವರಗಳನ್ನು ನ್ಯಾಯಾಧೀಕರಣ ಅಥವಾ ಕೋರ್ಟ್ ಮುಂದೆ ಪ್ರಸ್ತುತ ಪಡಿಸದೇ ಇರುವ ತಮಿಳುನಾಡಿನ ಯಾವುದೇ ಯೋಜನೆಯನ್ನು ನಾವು ವಿರೋಧಿಸುತ್ತೇವೆ' ಎಂದು ಗೋವಿಂದ ಕಾರಜೋಳ ಆಕ್ಷೇಪಿಸಿದರು.

‘ತಮಿಳುನಾಡು ಸರಕಾರದ ಹೊಗೇನಕಲ್ ಯೋಜನೆಗೆ ಅವಕಾಶ ನೀಡುವುದಿಲ್ಲ. ಸರಕಾರ ಕಾನೂನಾತ್ಮಕ ಕ್ರಮಗಳ ಮೂಲಕವೂ ಆಕ್ಷೇಪಿಸಲಿದೆ. ತಮಿಳುನಾಡು ಪ್ರಕಟಿಸಿರುವ ಯೋಜನೆ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವುದರಿಂದ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ವಿವಿಧ ಆಯಾಮಗಳಲ್ಲಿ ಹಾಗೂ ಕಾನೂನಾತ್ಮಕ ಪರಿಶೀಲನೆಗೆ ಒಳಪಡಬೇಕಾಗುತ್ತದೆ' ಎಂದರು.

ತಮಿಳುನಾಡು ಏಕಪಕ್ಷೀಯವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೊಗೇನಕಲ್ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡಿನ ಜಂಟಿ ಗಡಿ ಪ್ರದೇಶದಲ್ಲಿ 64 ಕಿ.ಮೀ ಉದ್ದದ ಭೂ ಪ್ರದೇಶದ ವ್ಯಾಪ್ತಿಯನ್ನು ಹೊಂದಿರುತ್ತದೆ. ಅಲ್ಲದೆ, ಗಡಿರೇಖೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ನ್ಯಾಯಾಧೀಕರಣದ ಐ-ತೀರ್ಪಿನ ಕಲಂ 13ರ ಅನ್ವಯ ಈ ಯೋಜನೆಯನ್ನು ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಮೂಲಕ ಕೈಗೆತ್ತಿಕೊಳ್ಳಬೇಕಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News