ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರಾಗಿ ವರಸಿದ್ದಿ ವೇಣುಗೋಪಾಲ್, ಉಪಾಧ್ಯಕ್ಷೆಯಾಗಿ ಉಮಾದೇವಿ ಆಯ್ಕೆ

Update: 2022-01-21 13:21 GMT
ವರಸಿದ್ಧಿ ವೇಣುಗೋಪಾಲ್                                  ಸಿ.ಎಚ್.ಉಮಾದೇವಿ

ಚಿಕ್ಕಮಗಳೂರು, ಜ.21: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ನಗರಸಭೆಯ 78ನೇ ಅಧ್ಯಕ್ಷರಾಗಿ 26ನೇ ವಾರ್ಡಿನ ಸದಸ್ಯ ವರಸಿದ್ಧಿ ವೇಣುಗೋಪಾಲ್ ಮತ್ತು 46ನೇ ಉಪಾಧ್ಯಕ್ಷರಾಗಿ 12ನೇ ವಾರ್ಡಿನ ಸದಸ್ಯೆ ಸಿ.ಎಚ್.ಉಮಾದೇವಿ ಕೃಷ್ಣಪ್ಪ ಆಯ್ಕೆಯಾದರು.

ಶುಕ್ರವಾರ ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಹಾಗೂ ಕಂದಾಯ ಇಲಾಖೆಯ ಹಿರಿಯ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಬಿಸಿಎಂ ಎ ವರ್ಗಕ್ಕೆ ಮೀಸಲಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ವರಸಿದ್ಧಿವೇಣುಗೋಪಾಲ್ ಮತ್ತು ಕಾಂಗ್ರೆಸ್ ಪಕ್ಷದಿಂದ ಸೈಯದ್ ಜಾವೀದ್ ನಾಮಪತ್ರ ಸಲ್ಲಿಸಿದ್ದರು. ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಸಿ.ಎಚ್.ಉಮಾದೇವಿ ಕೃಷ್ಣಪ್ಪ ಮತ್ತು ಕಾಂಗ್ರೆಸ್ ಪಕ್ಷದಿಂದ ಕೆ.ಆರ್.ಮಂಜುಳಾ ನಾಮಪತ್ರ ಸಲ್ಲಿಸಿದ್ದರು.

ಮಧ್ಯಾಹ್ನ 1 ಗಂಟೆ 10 ನಿಮಿಷಕ್ಕೆ ಮತದಾನ ಪ್ರಕ್ರಿಯೇ ಆರಂಭಗೊಂಡು ಬಿಜೆಪಿ ಪಕ್ಷದ ವರಸಿದ್ಧಿವೇಣು ಗೋಪಾಲ್ 23 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೈಯದ್ ಜಾವೀದ್ ಕೇವಲ 13 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಪಕ್ಷದ ಸಿ.ಎಚ್.ಉಮಾದೇವಿ 23 ಮತಗಳನ್ನು ಪಡೆದು ಆಯ್ಕೆಯಾದರೇ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸಿದ್ದ ಕೆ.ಆರ್.ಮಂಜುಳಾ 13 ಮತಗಳನ್ನು ಪಡೆದರು. 

26ನೇ ವಾರ್ಡಿನ ಸದಸ್ಯ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷರಾಗಿ ಮತ್ತು 12ನೇ ವಾರ್ಡಿನ ಸದಸ್ಯೆ ಸಿ.ಎಚ್.ಉಮಾದೇವಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಹಿರಿಯ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಅಧಿಕೃತವಾಗಿ ಘೋಷಿಸಿದ ಬಳಿಕ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿತು. 

ನಗರಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ 18 ಸದಸ್ಯರು ಸೇರಿದಂತೆ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಜೆಡಿಎಸ್ ಪಕ್ಷದ ಇಬ್ಬರು ಸದಸ್ಯರು ಹಾಗೂ ಒಬ್ಬರು ಪಕ್ಷೇತರ ಸದಸ್ಯ ವರಸಿದ್ಧಿವೇಣುಗೋಪಾಲ್ ಮತ್ತು ಸಿ.ಎಚ್.ಉಮಾದೇವಿ ಪರ ಮತ ಚಲಾಯಿಸಿದ್ದು, ಇಬ್ಬರೂ ತಲಾ 23 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸೈಯದ್ ಜಾವೀದ್ ಮತ್ತು ಕೆ.ಆರ್.ಮಂಜುಳಾ ತಲಾ 13 ಮತಗಳನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News