ಮ್ಯಾನ್ಮಾರ್: ಆಂಗ್ ಸೂಕಿ ಪಕ್ಷದ ಮುಖಂಡನಿಗೆ ಮರಣದಂಡನೆ ಶಿಕ್ಷೆ

Update: 2022-01-22 15:29 GMT
ಆಂಗ್‌ಸಾನ್ ಸೂಕಿ

ಯಾಂಗಾನ್, ಜ.22: ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್‌ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್‌ಎಲ್‌ಡಿ) ಪಕ್ಷದ ಪ್ರಮುಖ ಮುಖಂಡ, ಪ್ರಜಾಪ್ರಭುತ್ವ ಪರ ಹೋರಾಟಗಾರ ಫಿಯೊ ಝೆಯರ್ಥಾವ್‌ಗೆ ಅಲ್ಲಿನ ಸೇನಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಅಲ್ ಜಝೀರಾ ಶನಿವಾರ ವರದಿ ಮಾಡಿದೆ.

ಭಯೋತ್ಪಾದನೆ ನಿಗ್ರಹ ಕಾನೂನಿನಡಿ ಎಸಗಿದ ಅಪರಾಧಕ್ಕಾಗಿ ಥಾವ್‌ರನ್ನು ನವೆಂಬರ್‌ನಲ್ಲಿ ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಮತ್ತೊಬ್ಬ ಪ್ರಮುಖ ಪ್ರಜಾಪ್ರಭುತ್ವ ಕಾರ್ಯಕರ್ತ ‘ಕೊ ಜಿಮ್ಮಿ’   ಎಂದೇ ಕರೆಯಲ್ಪಡುವ ಕ್ಯಾವ್ ಮಿನ್ ಯು ಕೂಡಾ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರು ಸ್ಫೋಟ, ಬಾಂಬ್ ದಾಳಿ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ಒದಗಿಸಿದ ಅಪರಾಧ ಸಾಬೀತಾಗಿದೆ ಎಂದು ಸೇನಾಪಡೆಯ ವಕ್ತಾರರ ಹೇಳಿಕೆ ತಿಳಿಸಿದೆ. ಮಿನ್ ಯೂ ವಿರುದ್ಧ ದಾಖಲಿಸಿದ್ದ ಆರೋಪವನ್ನು ಅವರ ಪತ್ನಿ ಕಳೆದ ಅಕ್ಟೋಬರ್‌ನಲ್ಲಿ ನಿರಾಕರಿಸಿದ್ದರು.

ಕಳೆದ ವರ್ಷದ ಫೆಬ್ರವರಿ 1ರಂದು ಆಂಗ್‌ಸಾನ್ ಸೂಕಿ ನೇತೃತ್ವದ ಸರಕಾರವನ್ನು ಕ್ಷಿಪ್ರಕ್ರಾಂತಿಯ ಮೂಲಕ ಪದಚ್ಯುತಗೊಳಿಸಿದ್ದ ಸೇನೆ ಅಧಿಕಾರ ಕೈವಶ ಮಾಡಿಕೊಂಡಿತ್ತು. ಇದನ್ನು ವಿರೋಧಿಸಿ ದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದ್ದು ಪ್ರತಿಭಟನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸಾವಿರಾರು ಮಂದಿಯನ್ನು ಸೇನೆ ಬಂಧಿಸಿತ್ತು. ಸೇನೆಯ ಕಾರ್ಯಾಚರಣೆಯಲ್ಲಿ ಸುಮಾರು 1,500 ನಾಗರಿಕರು ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News