ಲಾಕ್ಡೌನ್ ಸಂಕಷ್ಟ; ಪ್ರಕಾಶ್ ಟ್ರಾವೆಲ್ಸ್ ಮಾಲಕ ನದಿಗೆ ಹಾರಿ ಆತ್ಮಹತ್ಯೆ ಶಂಕೆ

Update: 2022-01-24 09:47 GMT
ಪ್ರಕಾಶ್

ಶಿವಮೊಗ್ಗ : ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲಕ ಪ್ರಕಾಶ್ (54) ಅವರ ಮೃತದೇಹ ಪತ್ತೆಯಾಗಿದೆ.

ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಸಮೀಪದ ಪಟಗುಪ್ಪ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಸಾಗರ ತಾಲೂಕಿನ ಪ್ರಕಾಶ್ ಟ್ರಾವೆಲ್ಸ್ ಮಾಲಕರಾದ ಪ್ರಕಾಶ್ ಅವರು ಶುಕ್ರವಾರ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ಕುಟುಂಬಸ್ಥರು ದೂರು ನೀಡಿದ್ದರು.

ಶನಿವಾರ ಸೇತುವೆ ಮೇಲೆ ಅವರ ಚಪ್ಪಲಿ ಪತ್ತೆಯಾಗಿತ್ತು. ಪ್ರಕಾಶ್ ಗಾಗಿ ನಿರಂತರವಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಸೋಮವಾರ  ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದೆ.

ಶಿವಮೊಗ್ಗದ ಸಾಗರ ಭಾಗದಲ್ಲಿ ಪ್ರಕಾಶ್ ಟ್ರಾವೆಲ್ಸ್ ಚಿರಪರಿಚಿತರಾಗಿದ್ದರು. ಪ್ರಕಾಶ್ ಸಾವಿಗೆ ಈವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುಮಾರು 20 ವರ್ಷಗಳಿಂದ ಬಸ್ಸುಗಳ ಸೇವೆ ಒದಗಿಸುತ್ತಿರುವ ಪ್ರಕಾಶ್ ಟ್ರಾವೆಲ್ಸ್, ಲಾಕ್ ಡೌನ್ ಆದ ಬಳಿಕ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿತ್ತು ಎಂದು ತಿಳಿದುಬಂದಿದೆ. ಸಂಸ್ಥೆ ಅಪಾರ ನಷ್ಟ ಅನುಭವಿಸಿದ್ದರಿಂದ ಮಾಲಕರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಪ್ರಕಾಶ್ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದು, ಪೊಲೀಸರ ತನಿಖೆಯಿಂದಲೇ ಸಾವಿಗೆ ಕಾರಣವೆನೆಂದು ತಿಳಿಯಬೇಕಿದೆ. ವಿವಿಧ ಆಯಾಮದಿಂದ ತನಿಖೆ ಮುಂದುವರಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News