ಕಾರು ಖರೀದಿಸಲು ಬಂದ ರೈತನನ್ನು ಅವಮಾನಿಸಿದ ಶೋರೂಮ್‌ ಸಿಬ್ಬಂದಿ: ಬಳಿಕ ರೈತ ಮಾಡಿದ್ದೇನು ಗೊತ್ತೇ?

Update: 2022-01-24 09:51 GMT
Photo: ndtv.com

ತುಮಕೂರು: ಬೊಲೆರೊ ಪಿಕ್ ಅಪ್ ಖರೀದಿಸಲು ಶೋರೂಮ್ ಗೆ ಹೋದ ರೈತನಿಗೆ "ನಿನಗೆ ಕಾರು ಖರೀದಿಸಲು ಸಾಧ್ಯವಿಲ್ಲ" ಎಂದು ಸೇಲ್ಸ್ ಮ್ಯಾನ್ ವ್ಯಂಗ್ಯವಾಡಿ ಅವಮಾನಿಸಿದ್ದ ಎನ್ನಲಾಗಿದ್ದು, ಸೇಲ್ಸ್ ಮ್ಯಾನ್ ಗೆ ಸವಾಲೆಸೆದ ರೈತ ನಾನು ಒಂದು ಗಂಟೆಯಲ್ಲಿ ಹಣದೊಂದಿಗೆ ಬರುತ್ತೇನೆ. ವಾಹನವನ್ನು ತಕ್ಷಣವೇ ನೀಡಬೇಕೆಂದು ಹೇಳಿದ್ದ. ಬಳಿಕ ಸವಾಲಿನಲ್ಲಿ ಸೋಲು ಕಂಡಿರುವ ಸೇಲ್ಸ್ ಮ್ಯಾನ್ ಅಂತಿಮವಾಗಿ ಕ್ಷಮೆಯಾಚಿಸಿದ್ದಾನೆನ್ನಲಾದ ಘಟನೆಯು ಶುಕ್ರವಾರ ಕರ್ನಾಟಕದ ತುಮಕೂರಿನ ಮಹೀಂದ್ರಾ ಶೋರೂಮ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಘಟನೆಯ ವೀಡಿಯೊಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಹಾಗೂ ಆನಂದ್ ಮಹೀಂದ್ರಾಗೆ ಟ್ವಿಟರ್ ನಲ್ಲಿ ಟ್ಯಾಗ್ ಮಾಡಲಾಗಿದೆ. ರೈತ ಕೆಂಪೇಗೌಡ ಎಂಬವರು ಬೊಲೆರೋ ಪಿಕ್ಅಪ್ ಖರೀದಿಸಲು ಶೋರೂಮ್ ಗೆ ಹೋಗಿದ್ದರು. ಈ ವೇಳೆ ಸೇಲ್ಸ್ ಮ್ಯಾನ್ ರೈತನ ಸಾಮಾನ್ಯ ವಸ್ತ್ರಧಾರಣಾ ಶೈಲಿ ಕಂಡು ತುಚ್ಛವಾಗಿ ಮಾತನಾಡಿದ್ದು, ರೈತನನ್ನು ಅಲ್ಲಿಂದ ತೆರಳುವಂತೆ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.

ಕಾರಿನ  ಮೌಲ್ಯ 10 ಲಕ್ಷ ರೂ. ಆಗಿದೆ ಎಂದ ಸೇಲ್ಸ್ ಮ್ಯಾನ್, ‘ನಿನ್ನ ಜೇಬಿನಲ್ಲಿ ರೂ. 10 ಕೂಡ ಇರಲಿಕ್ಕಿಲ್ಲ’ ಎಂದಿದ್ದ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ.

“ನಾನು ಒಂದು ಗಂಟೆಯೊಳಗೆ ಹಣ ತಂದರೆ ಅದೇ ದಿನ ಎಸ್ಯುವಿ ವಿತರಣೆಗೆ ವ್ಯವಸ್ಥೆ ಮಾಡುವಂತೆ ಕೆಂಪೇಗೌಡ ಸೇಲ್ಸ್ ಮ್ಯಾನ್ ಗೆ ಸವಾಲು ಎಸೆದಿದ್ದ. ರೈತ ಒಂದು ಗಂಟೆಯಲ್ಲಿ ನಗದಿನೊಂದಿಗೆ ಹಿಂತಿರುಗಿದ್ದಾನೆ. ಆಶ್ಚರ್ಯಚಕಿತಗೊಂಡ ಸೇಲ್ಸ್ ಎಕ್ಸಿಕ್ಯೂಟಿವ್ ಗೆ ಕೂಡಲೇ ಕಾರನ್ನು ವಿತರಣೆ ಮಾಡಲು ಸಾಧ್ಯವಾಗಲಿಲ್ಲ. 

ಕೆಲವೊಂದು ಬಾರಿ ಕಾರುಗಳಿಗೆ ವೇಟಿಂಗ್ ಲಿಸ್ಟ್ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಕಾರನ್ನು ನಾಲ್ಕು ದಿನದೊಳಗೆ ವಿತರಣೆ ಮಾಡಲಾಗುತ್ತದೆ. 

ಕೆಂಪೇಗೌಡ ಮತ್ತು ಅವರ ಸ್ನೇಹಿತರು ಕೂಡಲೇ ಸೇಲ್ಸ್‌ ಮ್ಯಾನ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯನ್ನು ತಿಳಿಗೊಳಿಸಿದರು. 

ಕೊನೆಗೆ ಸೇಲ್ಸ್ ಎಕ್ಸಿಕ್ಯೂಟಿವ್, ರೈತ ಕೆಂಪೇಗೌಡರ ಕ್ಷಮೆ ಕೇಳಿದ್ದಾನೆ. ನಿಮ್ಮ ಶೋರೂಮ್ನಿಂದ ಕಾರು ಖರೀದಿಸಲು ನನಗೆ ಇಷ್ಟವಿಲ್ಲ ಎಂದ ರೈತ ತನ್ನ ರೂ. 10 ಲಕ್ಷದೊಂದಿಗೆ ತೆರಳಿದ್ದಾನೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News