×
Ad

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕಂದಾಯ ಸಚಿವ ಆರ್. ಅಶೋಕ್‌ ಗಿಲ್ಲ ಉಸ್ತುವಾರಿ ಹೊಣೆ

Update: 2022-01-24 18:35 IST
ಆರ್. ಅಶೋಕ್‌ / ಜೆ.ಸಿ.ಮಾಧುಸ್ವಾಮಿ

ಬೆಂಗಳೂರು, ಜ.24: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಜಿಲ್ಲಾ ಉಸ್ತುವಾರಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೆ ಕೆಲ ಸಚಿವರಲ್ಲಿ ಅಸಮಾಧಾನ ಮನೆ ಮಾಡಿದೆ ಎಂದು ತಿಳಿದು ಬಂದಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಜಿಲ್ಲಾ ಉಸ್ತುವಾರಿಗಳ ಪಟ್ಟಿಯಿಂದ ಕೈ ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ತುಮಕೂರು ಜಿಲ್ಲೆಯಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಜೆ.ಸಿ.ಮಾಧುಸ್ವಾಮಿ ಬದಲು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಉಸ್ತುವಾರಿ ನೀಡಲಾಗಿದೆ.

ಅದೇ ರೀತಿ ಬೆಂಗಳೂರು ನಗರ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಆರ್.ಅಶೋಕ್‌ಗೆ ಯಾವುದೆ ಜಿಲ್ಲೆಯ ಉಸ್ತುವಾರಿ ಲಭಿಸದಿರುವುದು ಅಚ್ಚರಿ ತಂದಿದೆ.

ಜೊತೆಗೆ, ಕೆಲವು ಸಚಿವರನ್ನು ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿರುವ ಜಿಲ್ಲೆಗಳಿಂದ ಬದಲಾಯಿಸಿ ಬೇರೆ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಮ್ಮ ಹಿಡಿತವನ್ನು ಸಾಧಿಸುತ್ತಿದ್ದ ಸಚಿವ ಎಂ.ಟಿ.ಬಿ.ನಾಗರಾಜ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಅದೇ ರೀತಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ತಳವೂರಲು ಕಾರಣರಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಣೆಗಾರಿಕೆ ನೀಡಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆಯನ್ನು ತೆರೆದ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರಿಗೆ ಶಿವಮೊಗ್ಗ ಜಿಲ್ಲೆಯ ಹೊಣೆಗಾರಿಕೆ ನೀಡಲಾಗಿದೆ. ಅಬಕಾರಿ ಸಚಿವ ಗೋಪಾಲಯ್ಯಗೆ ಹಾಸನ ಜಿಲ್ಲೆಯ ಜೊತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಹೆಗಲಿಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

ಹಾವೇರಿ ಜಿಲ್ಲೆಯ ಮೇಲೆ ಕಣ್ಣಿಟ್ಟಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ಚಿತ್ರದುರ್ಗ ಹಾಗೂ ಗದಗ ಜಿಲ್ಲೆಯ ಹೊಣೆಗಾರಿಕೆ ವಹಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉಸ್ತುವಾರಿಯಾಗಿದ್ದ ಅರಬೈಲ್ ಶಿವರಾಮ್ ಹೆಬ್ಬಾರ್‌ಗೆ ಹಾವೇರಿ ಜಿಲ್ಲೆಯ ಹೊಣೆಗಾರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿಗೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಮಾಡಲಾಗಿದೆ.

ವಿಜಯನಗರ ಜಿಲ್ಲೆ ರಚನೆಗೆ ಕಾರಣಕರ್ತರಾದ ಸಚಿವ ಆನಂದ್ ಸಿಂಗ್‌ಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ವಿಜಯಪುರ ಜಿಲ್ಲೆಯ ಉಸ್ತುವಾರಿಯಾಗಿದ್ದ ಶಶಿಕಲಾ ಜೊಲ್ಲೆಗೆ ವಿಜಯನಗರ ಜಿಲ್ಲೆಯ ಹೊಣೆಗಾರಿಕೆ ನೀಡಲಾಗಿದೆ. 

ಉಸ್ತುವಾರಿ ಉಳಿಸಿಕೊಂಡವರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(ಬೆಂಗಳೂರು ನಗರ), ಗೋವಿಂದ ಕಾರಜೋಳ(ಬೆಳಗಾವಿ), ಡಾ.ಸಿ.ಎನ್.ಅಶ್ವತ್ಥ ನಾರಾಯಣ (ರಾಮನಗರ), ಮುರುಗೇಶ್ ನಿರಾಣಿ(ಕಲಬುರಗಿ), ಎಸ್.ಟಿ.ಸೋಮಶೇಖರ್(ಮೈಸೂರು), ಬಿ.ಎ.ಬಸವರಾಜ(ದಾವಣಗೆರೆ), ಕೆ.ಗೋಪಾಲಯ್ಯ(ಹಾಸನ) ಹಾಗೂ ಮುನಿರತ್ನ(ಕೋಲಾರ) ಈ ಹಿಂದೆ ತಾವು ಉಸ್ತುವಾರಿಯಾಗಿದ್ದ ಜಿಲ್ಲೆಗಳನ್ನು ಉಳಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News