ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷ ಸಂಘಟನೆಗೆ ಸಿದ್ದ ಎಂದ ಸಚಿವ ಈಶ್ವರಪ್ಪ
ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ನಾಯಕರು ಹಾಗೂ ಪರಿವಾರದವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆ ಮಾಡಿ ಅಂದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ದನಿದ್ದೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದೆ. ಆದ್ದರಿಂದ ಈ ರೀತಿ ಚರ್ಚೆ ಆಗೋದು ಸಾಮಾನ್ಯ ಎಂದಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಈಗ ಚರ್ಚೆ ಆಗುತ್ತಿರುವುದು ಸ್ವಾಭಾವಿಕ. ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದೆ. ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮೂರು ತಿಂಗಳು ಬಾಕಿ ಇದೆ. ರಾಷ್ಟ್ರೀಯ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಕೂತು ಚರ್ಚೆ ಮಾಡಿ, ಯಾರಿಗೆ ಅವಕಾಶ ಕೊಟ್ಟರೆ ಒಳ್ಳೆಯದು ಎಂದು ಚಿಂತನೆ ಮಾಡುತ್ತಾರೆ. ರಾಜ್ಯದ ಹಿತದೃಷ್ಟಿ, ಜಿಲ್ಲೆ, ಎಲ್ಲಾ ಸಮಾಜವನ್ನು ನೋಡಿ ಪರಿಗಣಿಸಿ ನಾಲ್ಕು ಸ್ಥಾನ ತುಂಬುತ್ತಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ಹುದ್ದೆ ಖಾಲಿ ಇದ್ದಾಗ ರಾಜಕೀಯ ಆಕಾಂಕ್ಷಿಗಳು ಸಹ ಇರೋದು ಸಹ ಸ್ವಾಭಾವಿಕ. ನಾನು ಮಂತ್ರಿ ಆಗಬೇಕು ಅಂತಾ ಎಂಎಲ್‌ಎ, ಎಂಎಲ್ಸಿ ಯೋಚನೆ ಮಾಡೋದು ತಪ್ಪಲ್ಲ. ಕೇಂದ್ರದ ನಾಯಕರು ಯಾರಿಗೆ ಘೋಷಣೆ ಮಾಡ್ತಾರೋ ಅವರು ಒಪ್ಕೋತ್ತಾರೆ. ಉಳಿದ ಬಿಜೆಪಿ ನಾಯಕರು ಅವರಿಗೆ ಸಹಕಾರ ಕೊಡುತ್ತಾರೆ. ಹಿಂದಿನಿಂದಲೂ ಅದೇ ನಡೆದುಕೊಂಡು ಬಂದಿದೆ. ಮುಂದೆ ಕೂಡ ಚೆನ್ನಾಗಿ ನಡೆಯುತ್ತದೆ ಎಂದರು.
ಹಿಂದಿನಿಂದಲೂ ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಮಂತ್ರಿಯಾಗು ಅಂದಾಗ ಮಂತ್ರಿ ಆಗಿದ್ದೇನೆ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡು ಅಂದಾಗ ಕೊಟ್ಟು, ರಾಜ್ಯಾಧ್ಯಕ್ಷ ಕೂಡ ಆಗಿದ್ದೇನೆ. ಈಗಲೂ ಸಹ ಕೇಂದ್ರ ಮತ್ತು ರಾಜ್ಯ ನಾಯಕರು ಹಾಗೂ ಪರಿವಾರದವರು ಹೇಳಿದ್ದಕ್ಕೆ ನಾನು ತಯಾರಿದ್ದೇನೆ. ಅವರು ಯಾವ ಸ್ಥಾನ ತಗೋಬೇಕು ಅಂತಾ ಹೇಳ್ತಾರೋ ಅಥವಾ ಪಕ್ಷ ಸಂಘಟನೆಗೆ ಸಂತೋಷದಿಂದ ಒಪ್ಪಿಕೊಳ್ತೇನೆ. ಮಂತ್ರಿ ಸ್ಥಾನಕ್ಕಿಂತ ಪಕ್ಷದ ಜವಾಬ್ದಾರಿ ನನಗೆ ತುಂಬಾ ಖುಷಿ ಎಂದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಬೇಕು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದರು.