73ನೇ ಗಣರಾಜ್ಯೋತ್ಸವ ಸಮಾರಂಭ: ಈ ಬಾರಿಯೂ ಸಾರ್ವಜನಿಕ ಪ್ರವೇಶ ರದ್ದು

Update: 2022-01-24 14:08 GMT

ಬೆಂಗಳೂರು, ಜ.24: ಕೋವಿಡ್ ಮೂರನೆ ಅಲೆ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ 73ನೆ ಗಣರಾಜ್ಯೋತ್ಸವ ಸಮಾರಂಭಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದ್ದು, ಉಳಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗಣರಾಜ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.26ರಂದು ಬೆಳಗ್ಗೆ 8.58ಕ್ಕೆ ಸ್ಥಳಕ್ಕೆ ಗೌರವಾನ್ವಿತ ರಾಜ್ಯಪಾಲರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳನ್ನು ರಾಜ್ಯಪಾಲರಿಗೆ ಪರಿಚಯಿಸಲಾಗುವುದು ಎಂದರು.

ಇದಾದ ಬಳಿಕ ನಾಡಗೀತೆ ಮತ್ತು ರೈತಗೀತೆ ಮೂಲಕ ಗಣರಾಜ್ಯೋತ್ಸವ ಆರಂಭವಾಗಲಿದೆ. 9 ಗಂಟೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣದ ನಂತರ ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ.

ಅದೇ ರೀತಿ, ಪರೇಡ್ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 60 ಸಿಸಿ ಕ್ಯಾಮೆರಾ ವ್ಯವಸ್ಥೆ, ಎರಡು ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಭದ್ರತಾ ದೃಷ್ಟಿಯಿಂದ ಪರೇಡ್‌ಗೆ ಆಗಮಿಸುವ ಆಹ್ವಾನಿತರು ಮೊಬೈಲ್ ಫೋನ್, ಹೆಲ್ಮೆಟ್, ಕ್ಯಾಮೆರಾ, ರೇಡಿಯೋ, ಕೊಡೆ ಮುಂತಾದ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಆಚರಣೆ ಸಂದರ್ಭದಲ್ಲಿ ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸದಂತೆ ನೋಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೈದಾನದ ಸಮೀಪ ಆ್ಯಂಬುಲೆನ್ಸ್ಗಳು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ನಗರದ ಹಲವು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದು ಗುಪ್ತ ಹೇಳಿದರು.

ಆಕಸ್ಮಿಕ ಬೆಂಕಿ ಅವಘಡ ನಿಭಾಯಿಸಲು ಅಗ್ನಿಶಾಮಕ ವಾಹನ ದಳಗಳನ್ನು ಸಿದ್ಧಪಡಿಸಲಾಗಿದ್ದು, ಕಾರ್ಯಕ್ರಮ ವೀಕ್ಷಣೆಗೆ ಬರುವ ಅತಿಗಣ್ಯ, ಗಣ್ಯ ಮತ್ತಿತರ ಆಹ್ವಾನಿತರಿಗೆ 200 ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಂದ ಅವರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ವೇದಿಕೆಯ ಬಲಭಾಗದಲ್ಲಿ ಮತ್ತು ಮಾಧ್ಯಮದವರಿಗೆ ವೇದಿಕೆಯ ಎಡಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಆಹ್ವಾನಿತರು ಕಡ್ಡಾಯವಾಗಿ ಮುಖಗವಸು ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಇದರ ಜತೆಗೆ ಸರಕಾರ ನೀಡಿರುವ ಪ್ರವೇಶ ಪತ್ರಗಳನ್ನು ಮೀಸಲಿಟ್ಟಿರುವ ದ್ವಾರಗಳ ಮೂಲಕ ತೆರಳಿ ತಮಗೆ ನಿಗದಿಪಡಿಸಿರುವ ಸ್ಥಳಗಳಲ್ಲಿ ಆಸೀನರಾಗಬೇಕೆಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News