ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ನಿರಾಕರಿಸುವುದು ಖೇದನೀಯ: ಡಾ.ಮುಹಮ್ಮದ್ ಸಾದ್ ಬೆಳಗಾಮಿ

Update: 2022-01-24 14:22 GMT

ಬೆಂಗಳೂರು, ಜ.24: ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದೆ, ಅವರ ಘನತೆ ಮತ್ತು ಶಿಕ್ಷಣದ ಹಕ್ಕನ್ನು ನಿರಾಕರಿಸುವುದು ಅತ್ಯಂತ ಖೇದನೀಯ ಮತ್ತು ಕಳವಳಕಾರಿ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ತಿಳಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2016ರಲ್ಲಿ ಕೇರಳ ಹೈಕೋರ್ಟ್ ಒಂದು ಮಹತ್ವದ ಪ್ರಕರಣದಲ್ಲಿ ಈ ಹಕ್ಕನ್ನು ಎತ್ತಿಹಿಡಿದಿದೆ ಎಂಬುದನ್ನು ಗಮನಿಸಬೇಕು ಎಂದರು.

ಆದುದರಿಂದ, ಸಂಬಂಧಪಟ್ಟ ಅಧಿಕಾರಿಗಳು, ಸರಕಾರ ಮತ್ತು ಶಿಕ್ಷಣ ಸಚಿವರು ಈ ಪ್ರಕರಣವನ್ನು ಅಶಿಸ್ತಿನ ವಿಷಯವಾಗಿ ನೋಡದೆ ಮೂಲಭೂತ ಹಕ್ಕು ಮತ್ತು ನಮ್ಮ ಸಮಾಜ ವೈವಿಧ್ಯತೆಯನ್ನು ಗೌರವಿಸುವಂತೆ ನಾವು ವಿನಂತಿಸುತ್ತೇವೆ ಎಂದು ಮುಹಮ್ಮದ್ ಸಾದ್ ಬೆಳಗಾಮಿ ತಿಳಿಸಿದರು.

ಹಿಜಾಬ್ ಎಂಬುವುದು ಮುಸ್ಲಿಮರು ಮತ್ತು ವಿವಿಧ ಸಮುದಾಯಗಳು ಬೇರೆ ಬೇರೆ ಹೆಸರುಗಳಲ್ಲಿ ಆಚರಣೆ ಮಾಡುವ ಒಂದು ಹಳೆಯ ಶಿಷ್ಟ ಉಡುಗೆಯಾಗಿದೆ. ಮಹಿಳೆಯರ ಅಸ್ಮಿತೆ ಮತ್ತು ಪ್ರಗತಿಗೆ ಇದು ಎಂದಿಗೂ ಅಡ್ಡಿಯಾಗಿರಲಿಲ್ಲ ಎಂದು ಅವರು ಹೇಳಿದರು.

ಸೂರ್ಯ ನಮಸ್ಕಾರಕ್ಕೆ ವಿರೋಧ: 73ನೇ ಗಣರಾಜ್ಯೋತ್ಸವದ ಅಂಗವಾಗಿ ಸಂಗೀತ ವಾದ್ಯದೊಂದಿಗೆ ಸೂರ್ಯ ನಮಸ್ಕಾರ ಮಾಡುವ ವಿಶೇಷ ಕಾರ್ಯಕ್ರಮಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚನೆ ನೀಡಿದೆ. 3 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಮೂಲಕ 30 ರಾಜ್ಯಗಳು, 30,000 ಸಂಸ್ಥೆಗಳಲ್ಲಿ 75 ಕೋಟಿ ಸೂರ್ಯ ನಮಸ್ಕಾರದ ಗುರಿಯನ್ನು ಸಾಧಿಸುವುದು ಯೋಜನೆಯಾಗಿದೆ ಎಂದು ಅವರು ಹೇಳಿದರು.

ಸೂರ್ಯ ನಮಸ್ಕಾರ ಸೂರ್ಯನಿಗೆ ಸಾಷ್ಟಾಂಗ ನಮಸ್ಕಾರ ಮತ್ತು ಸ್ತೋತ್ರಗಳ ಪಠಣವನ್ನು ಒಳಗೊಂಡ ಭಕ್ತಿಪೂರ್ವಕ ಯೋಗಾಭ್ಯಾಸ. ಇಸ್ಲಾಮ್ ಧರ್ಮವು ಇಂತಹ ಯಾವುದೇ ಸೃಷ್ಟಿ ಆರಾಧನೆ ಅಥವಾ ಯಾವುದೆ ಸೃಷ್ಟಿಗೆ ಭಕ್ತಿಯನ್ನು ಸಮರ್ಪಿಸುವುದನ್ನು ಬಲವಾಗಿ ನಿಷೇಧಿಸುತ್ತದೆ ಮತ್ತು ಸಂಪೂರ್ಣ ವಿಶ್ವದ ಸೃಷ್ಟಿಕರ್ತನಾದ ಅಲ್ಲಾಹ್‌ನಿಗೆ ಮಾತ್ರ ಆರಾಧನೆಯನ್ನು ಸಲ್ಲಿಸಲು ಕಟ್ಟುನಿಟ್ಟಾಗಿ ಆದೇಶಿಸುತ್ತದೆ ಎಂದು ಮುಹಮ್ಮದ್ ಸಾದ್ ಬೆಳಗಾಮಿ ತಿಳಿಸಿದರು.

ಮುಸ್ಲಿಮರು ಅತೀ ಹೆಚ್ಚು ಪ್ರೀತಿಸುವ ಪ್ರವಾದಿ ಮುಹಮ್ಮದ್(ಸ) ಅವರ ವ್ಯಕ್ತಿತ್ವಕ್ಕೂ ಸಾಷ್ಟಾಂಗ ನಮಸ್ಕಾರ ಮಾಡಲು ಮುಸ್ಲಿಮರಿಗೆ ಅವಕಾಶವಿಲ್ಲ. ಅಲ್ಲದೆ, ಸೂರ್ಯಾರಾಧನೆಯನ್ನು ಹೋಲುವ ಅಂತಹ ಯಾವುದೇ ಸಂದೇಹವನ್ನು ತಪ್ಪಿಸಲು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನಮಾಝ್ ಮಾಡುವುದನ್ನೂ ನಿಷೇಧಿಸಿದೆ ಎಂದು ಅವರು ಹೇಳಿದರು.

ನರಗುಂದದಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಹಾಗೂ ಪ್ರಚೋದನಾತ್ಮಕ ಘಟನೆಗಳು ಮುಸ್ಲಿಮ್ ಯುವಕನ ಸಾವು ಮತ್ತು ಮತ್ತೊಬ್ಬನಿಗೆ ಗಂಭೀರ ಗಾಯಗಳಿಗೆ ಕಾರಣವಾಗಿರುವುದು ಅತ್ಯಂತ ಖಂಡನೀಯ. ಇಂತಹ ಕೋಮುಶಕ್ತಿಗಳು ಮನುಷ್ಯ ವಿರೋಧಿ ಕೃತ್ಯಗಳು ಪುನರಾವರ್ತನೆಯಾಗದಂತೆ ನಾವು ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.

ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯೂ ವಾತಾವರಣವನ್ನು ಹಾಳು ಮಾಡಿದೆ ಮತ್ತು ಸರಕಾರ ಅದನ್ನು ಪುನರ್ ಪರಿಶೀಲಿಸಬೇಕಾಗಿದೆ ಹಾಗೂ ಆ ಪ್ರಕ್ರಿಯೆಯನ್ನು ಮುಂದುವರೆಸಬಾರದು ಎಂದು ಮುಹಮ್ಮದ್ ಸಾದ್ ಬೆಳಗಾಮಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಯೂಸುಫ್ ಕನ್ನಿ, ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಉಡುಪಿ, ಮೌಲಾನ ವಹೀದುದ್ದೀನ್ ಖಾನ್, ಮಾಧ್ಯಮ ಕಾರ್ಯದರ್ಶಿ ಮುಹಮ್ಮದ್ ನವಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News