ಅನುದಾನ ಖರ್ಚಾಗಿರುವ ಮಾಹಿತಿ ಒದಗಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ

Update: 2022-01-24 16:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.24: 2021-22ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನದ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯು ಜಂಟಿ ನಿರ್ದೇಶಕ ಮತ್ತು ಪ್ರಾಂಶುಪಾಲರಿಗೆ ಆದೇಶಿಸಿದೆ. 

ಪ್ರಸಕ್ತ ಸಾಲಿನಲ್ಲಿ ಇಲಾಖೆಯು ಪ್ರಥಮ ದರ್ಜೆ ಕಾಲೇಜುಗಳ ಸಿಬ್ಬಂದಿಗಳ ಪ್ರಯಾಣ ವೆಚ್ಚಕ್ಕಾಗಿ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಹಾಗೂ ಕಚೇರಿ ವೆಚ್ಚ, ಪಠ್ಯಪುಸ್ತಕ, ವಿದ್ಯುತ್ ಬಿಲ್ ಪಾವತಿ, ಪೀಠೋಪಕರಣ ವೆಚ್ಚ ಸೇರಿದಂತೆ ಇತರೆ ವೆಚ್ಚಕ್ಕಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗಳ ಪ್ರಾಂಶುಪಾಲರಿಗೆ ಲೆಕ್ಕ ಶೀರ್ಷಿಕೆಗಳ ಅಡಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. 

ಅನುದಾನ ಬಿಡುಗಡೆ ಆದೇಶದಲ್ಲಿ ಅನುದಾನವನ್ನು ಕೂಡಲೇ ಬಳಸಿಕೊಂಡು ಬಳಕೆ ಪ್ರಮಾಣ ಪತ್ರವನ್ನು ಇಲಾಖೆಗೆ ಸಲ್ಲಿಸುವಂತೆ ಸೂಚಿಸಲಾಗಿದ್ದರೂ, ಪ್ರಮಾಣ ಪತ್ರವನ್ನು ಸಲ್ಲಿಸದಿರುವುದು ಖಜಾನೆ-2ರ ವೆಚ್ಚಪಟ್ಟಿಯಿಂದ ತಿಳಿದುಬಂದಿರುತ್ತದೆ. ಹಾಗಾಗಿ ಜ.31ರೊಳಗೆ ಅನುದಾನ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅನುದಾನದ ಅಗತ್ಯತೆ ಇಲ್ಲದಿದ್ದಲ್ಲಿ, ಕೂಡಲೇ ಮರು ಒಪ್ಪಿಸುವಂತೆ ತಿಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಅನುದಾನ ವೆಚ್ಚವಾಗದಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ, ಅನುದಾನದ ಅವಶ್ಯಕತೆ ಇರುವುದಿಲ್ಲ ಎಂದು ಪರಿಗಣಿಸಿ ಅನುದಾನವನ್ನು ಹಿಂಪಡೆಯಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News