×
Ad

ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರಕಾರ: ಎಎಪಿ ಆರೋಪ

Update: 2022-01-24 23:11 IST

ಬೆಂಗಳೂರು, ಜ.24: ನಗರದಲ್ಲಿರುವ ರಾಜಕಾಲುವೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸದೆ, ರಾಜ್ಯ ಬಿಜೆಪಿ ಸರಕಾರವು ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆಮ್‌ಆದ್ಮಿ ಪಕ್ಷದ ಬೆಂಗಳೂರು ಜಿಲ್ಲಾ ನಗರಾಧ್ಯಕ್ಷ ಮೋಹಾನ್ ದಾಸರಿ ಆರೋಪಿಸಿದ್ದಾರೆ. 

ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಸುಮಾರು 1,700 ಕೋಟಿ ರೂ.ಗಳ ಟೆಂಡರ್ ಅನ್ನು ಟೆಂಡರ್ ಕರೆಯದೆ, 4ಜಿ ವಿನಾಯಿತಿ ನೀಡಲಾಗಿತ್ತು. ಇದನ್ನು ಎಎಪಿ ಪಕ್ಷವು ಬಲವಾಗಿ ವಿರೋಧಿಸಿತ್ತು. ಪರಿಣಾಮವಾಗಿ ರಾಜ್ಯ ಸರಕಾರವು ಟೆಂಡರ್ ಹೊರಡಿಸಲು ಮುಂದಾಯಿತು. ಆದರೆ ಕೇವಲ 7 ದಿನಗಳ ಕಾಲಾವಧಿಯಲ್ಲಿ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಮೂಲಕ ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಬಿಜೆಪಿ ಸರಕಾರವು ಮುಂದಾಗಿದೆ ಎಂದು ಹೇಳಿದರು. 

1,700 ರೂ. ಮೊತ್ತದ ಟೆಂಡರ್‌ಗೆ ಕಾನೂನಿನ ಪ್ರಕಾರ ಒಂದು ತಿಂಗಳ ಅವಧಿ ನೀಡಬೇಕು. ಆದರೆ, ಕೇವಲ ಏಳು ದಿನಗಳ ಅವಧಿ ನೀಡಿದ್ದಾರೆ. ಈ ಏಳು ದಿಗಳಲ್ಲಿ ಮೂರು ದಿನಗಳ ರಜಾ ದಿನಗಳಾಗಿವೆ. ಹೀಗೆ ಯೋಜನೆ ರೂಪಿಸಿ, ಹಣ ಲೂಟಿ ಮಾಡುವ ಯೋಚನೆಯಲ್ಲಿರುವ ರಾಜ್ಯ ಸರಕಾರವು ಬಿಬಿಎಂಪಿ ಚುನಾವಣೆಗಾಗಿ ಹಣ ಸಂಗ್ರಹಿಸುತ್ತಿದೆ ಎಂದು ವಿವರಿಸಿದರು. 

ಯಲಹಂಕ, ಬೆಂಗಳೂರು ದಕ್ಷಿಣ, ದಾಸರಹಳ್ಳಿ, ರಾಜರಾಜೇಶ್ವರಿ ನಗರದಲ್ಲಿ ಈ ರಾಜಕಾಲುವೆ ಕಾಮಗಾರಿ ನಡೆಸಲು ಮುಂದಾಗಿದ್ದು, ಈ ವಿಧಾನಸಭಾ ಕ್ಷೇತ್ರದ ಶಾಸಕರೂ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆ ಎಂದು ಅವರು ತಿಳಿಸಿದರು. 

'ಶೇ.40ರಷ್ಟು ಕಮಿಷನ್ ನಿಂತಿಲ್ಲ'
ಕಾಮಗಾರಿಗಳಲ್ಲಿ ರಾಜ್ಯ ಸರಕಾರವು ಶೇ.40 ಕಮಿಷನ್ ದಂಧೆಯನ್ನು ತನಿಖೆಗೆ ಒಳಪಡಿಸದೆ ಮುಂದುವರೆಸುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ಇದಲ್ಲದೆ, ತಮಗೆ ಆಪ್ತರಾದ ಪ್ರಭಾವಿಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅದನ್ನು ಮರೆಮಾಚುವ ಉದ್ದೇಶವು ರಾಜ್ಯ ಸರಕಾರದ್ದಾಗಿದೆ. 
-ಚನ್ನಪ್ಪಗೌಡ ನೆಲ್ಲೂರು, ರಾಜಕೀಯ ಚಟುವಟಿಕೆಗಳ ಮುಖ್ಯಸ್ಥ, ಎಎಪಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News