ಕೋವಿಡ್ ಪರಿಹಾರ ಧನ: ವಿಳಂಬವೇಕೆ?

Update: 2022-01-25 02:50 GMT

ಕಳೆದ ಎರಡು ವರ್ಷಗಳಿಂದ ಭಾರತ ಕೋವಿಡ್ ಹೊಡೆತದಿಂದ ತತ್ತರಿಸಿ ಹೋಗಿದೆ.ಈಗ ಮೂರನೇ ಅಲೆ ಒಮೈಕ್ರಾನ್ ಹೆಸರಿನಲ್ಲಿ ಈ ಸೋಂಕು ಸಮುದಾಯದಲ್ಲಿ ವ್ಯಾಪಕವಾಗಿ ಹರಡುವ ಹಂತದಲ್ಲಿದೆ. ಆದರೆ ಕೋವಿಡ್ ಮೊದಲ ಅಲೆಯಲ್ಲಿ ಸಾವಿಗೀಡಾದವರ ಕುಟುಂಬದವರಿಗೆ ಇದುವರೆಗೂ ಪರಿಹಾರ ದೊರೆತಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಕೋವಿಡ್ ಸೋಂಕಿನಿಂದ ಅಸು ನೀಗಿದವರಿಗೆ ಬಿಹಾರ, ಆಂಧ್ರಪ್ರದೇಶ ಸೇರಿದಂತೆ ಕೆಲ ರಾಜ್ಯಗಳು ಘೋಷಿತ ಪರಿಹಾರ ಧನವನ್ನು ವಿತರಣೆ ಮಾಡಿಲ್ಲ. ಈ ಕುರಿತು ಕೆಲ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರಕಾರಗಳ ನಿರ್ಲಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರಿಂ ಕೋರ್ಟ್ ಸಾವಿಗೀಡಾದವರಿಗೆ ತಕ್ಷಣ ಸೂಕ್ತ ಪರಿಹಾರ ಧನವನ್ನು ವಿತರಿಸಬೇಕು ಹಾಗೂ ಈ ಕುರಿತು ಕೋರ್ಟ್‌ಗೆ ಫೆಬ್ರವರಿ 4ನೇ ತಾರೀಖಿನ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಕೋವಿಡ್‌ನಿಂದ ಕೊನೆಯುಸಿರೆಳೆದವರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿಗಳನ್ನು 30 ದಿನಗಳೊಳಗಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷವೇ ಆದೇಶ ನೀಡಿತ್ತು. ಈ ಆದೇಶದ ಕೆಲ ರಾಜ್ಯಗಳು ಈಗಾಗಲೇ ಪರಿಹಾರ ಧನವನ್ನು ನೀಡಿವೆ. ಕೆಲ ರಾಜ್ಯಗಳು ಅರ್ಧ ಪರಿಹಾರವನ್ನು ನೀಡಿವೆ. ಕೆಲ ರಾಜ್ಯಗಳು ಕಡಿಮೆ ಸಾವಿನ ಸುಳ್ಳು ಲೆಕ್ಕ ತೋರಿಸಿವೆ. ರಾಜ್ಯಗಳು ತೋರಿಸಿದ ಸುಳ್ಳು ಲೆಕ್ಕಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಜಾಪ್ರಭುತ್ವದಲ್ಲಿ ಸರಕಾರಗಳು ಜನಪ್ರಿಯತೆಗಾಗಿ ಹಾಗೂ ಬಿಕ್ಕಟ್ಟಿನಿಂದ ಪಾರಾಗಲು ಪರಿಹಾರ ಧನದ ಘೋಷಣೆ ಮಾಡುತ್ತವೆ. ಆದರೆ ಅದಕ್ಕೆ ತಕ್ಕ ಬದ್ಧತೆಯನ್ನು ಅವು ತೋರಿಸುವುದಿಲ್ಲ. ಸಿದ್ಧತೆಯನ್ನು ಮಾಡಿಕೊಳ್ಳುವುದಿಲ್ಲ. ಕೋವಿಡ್ ಸಂತ್ರಸ್ತರಿಗೆ ಪರಿಹಾರ ಧನ ಇದೆ ಎಂಬುದೇ ಸಂತ್ರಸ್ತರ ಕುಟುಂಬದ ಸದಸ್ಯರಿಗೆ ತಿಳಿದಿರುವುದಿಲ್ಲ. ಸರಕಾರ ತಿಳಿಸುವ ಪ್ರಯತ್ನವನ್ನೂ ಮಾಡುವುದಿಲ್ಲ.ಅದರಲ್ಲೂ ಸರಕಾರ ನೂರೆಂಟು ಷರತ್ತುಗಳನ್ನು ಹಾಕುತ್ತದೆ. ಪರಿಹಾರ ಧನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಂತೆ. ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿರುವ, ಆಧುನಿಕ ತಂತ್ರಜ್ಞಾನದ ಪರಿಚಯವೇ ಇಲ್ಲದ ನಮ್ಮ ದೇಶದಲ್ಲಿ ಜನಸಾಮಾನ್ಯರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯವಾಗುತ್ತದೆ?. ಕೆಲವು ರಾಜ್ಯಗಳು ಕೋವಿಡ್ ಸಂತ್ರಸ್ತರ ಅರ್ಜಿಗಳನ್ನು ತಾಂತ್ರಿಕ ನೆಪ ಮುಂದೆ ಮಾಡಿ ತಿರಸ್ಕರಿಸಿವೆ. ಇದಕ್ಕೂ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಟಿಫಿಕೇಟ್ ಇಲ್ಲ ಎಂಬ ಕಾರಣಕ್ಕಾಗಿ ಪರಿಹಾರವನ್ನು ತಿರಸ್ಕರಿಸುವಂತಿಲ್ಲ ಎಂದು ಹೇಳಿದೆ.

ಕೋವಿಡ್ ಮೊದಲನೇ ಅಲೆಯಿಂದಲೇ ಒಕ್ಕೂಟ ಸರಕಾರ ಇದನ್ನು ಸರಿಯಾಗಿ ನಿಭಾಯಿಸಲಿಲ್ಲ. ಈ ಕುರಿತು ಪ್ರಧಾನಿ ಪರಿಹಾರ ನಿಧಿ ಎಂಬುದು ಇದ್ದರೂ ಸರಕಾರ ‘ಪಿ.ಎಂ.ಕೇರ್ಸ್’ ಎಂಬ ಖಾತೆಯನ್ನು ತೆರೆದು ನಿಧಿಯನ್ನು ಸಂಗ್ರಹಿಸಿತು. ಆ ಹಣ ಯಾವುದಕ್ಕೆ ಬಳಸಲಾಗುತ್ತದೆ ಎಂಬುದೂ ಗೊತ್ತಿಲ್ಲ. ಸರಕಾರದ ನಿರ್ಲಕ್ಷದಿಂದ ಒಮ್ಮಿಂದೊಮ್ಮೆಲೇ ಹೇರಿದ ಲಾಕ್‌ಡೌನ್ ಪರಿಣಾಮವಾಗಿ ದೇಶದ ಉದ್ದಗಲಕ್ಕೂ ಸಾವಿರಾರು ಜನ ವಾಹನ ಸೌಕರ್ಯ ಇಲ್ಲದೆ ಕಾಲ್ನಡಿಗೆಯಲ್ಲೇ ಸಾವಿರಾರು ಕಿ.ಮೀ. ಸಂಚರಿಸಿ ತಮ್ಮ ಊರುಗಳನ್ನು ತಲುಪಿದರು. ದಾರಿಯಲ್ಲಿ ಕೆಲವರು ಬೀದಿ ಹೆಣವಾದರು. ಆಕ್ಸಿಜನ್ ಕೊರತೆಯಿಂದ ಸಂಭವಿಸಿದ ಸಾವುಗಳಿಗೆ ಲೆಕ್ಕವೇ ಇಲ್ಲ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರಕಿದ್ದರೆ ಇವರಲ್ಲಿ ಅನೇಕರು ಬದುಕಿ ಉಳಿಯುತ್ತಿದ್ದರು. ಹಲವು ಕುಟುಂಬಗಳೂ ಉಳಿಯುತ್ತಿತ್ತು.

ಸಾರ್ವಜನಿಕ ಕ್ಷೇತ್ರದ ಆರೋಗ್ಯ ಪಾಲನೆ ಸರಕಾರದ ಹೊಣೆಗಾರಿಕೆಯಾಗಿದೆ.ಹೊಣೆಗಾರಿಕೆ ನಿಭಾಯಿಸುವಲ್ಲಿ ಸರಕಾರದಿಂದ ಲೋಪವಾದಾಗ ಸಂತ್ರಸ್ತರಿಗೆ ಪರಿಹಾರ ಘೋಷಿಸಬೇಕು. ಘೋಷಿತ ಪರಿಹಾರವನ್ನು ಸಕಾಲದಲ್ಲಿ ಸಂತ್ರಸ್ತರಿಗೆ ವಿತರಿಸಬೇಕು ಇದಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ಹೇಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು.

ಕೋವಿಡ್ ಮೂರನೇ ಅಲೆ ಅಬ್ಬರಿಸುತ್ತಿರುವಾಗಲೂ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ಅವ್ಯವಸ್ಥೆ ತಾಂಡವವಾಡುತ್ತಿದೆ. ದೇಶವ್ಯಾಪಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಒಕ್ಕೂಟ ಸರಕಾರವೇನೋ ನಿರ್ದೇಶನ ನೀಡಿದೆ. ಆದರೆ ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಈ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯ ತಾಣಗಳಾಗಿವೆ. ಎಲ್ಲೆಡೆ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಇನ್ನು ಆರೋಗ್ಯ ಕವಚ-108 ಎಂದು ಹೆಸರಾದ ಆ್ಯಂಬುಲೆನ್ಸ್ ವ್ಯವಸ್ಥೆ ಹೆಸರಿಗೆ ಮಾತ್ರ ಇದೆ.

2008ರಲ್ಲಿ 150, 2009-10ರಲ್ಲಿ 367 ಆ್ಯಂಬುಲೆನ್ಸ್‌ಗಳನ್ನು 108ಕ್ಕೆ ಸೇರಿಸಿ ಆರೋಗ್ಯ ಕವಚ ಯೋಜನೆ ಆರಂಭಿಸಲಾಗಿತ್ತು. 2014-15ರ ವೇಳೆಗೆ ಈ ವ್ಯವಸ್ಥೆಯ ಅಡಿಯಲ್ಲಿ 710 ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ 340 ಹೆಚ್ಚು ಆ್ಯಂಬುಲೆನ್ಸ್ ಗಳು ಏಳು ವರ್ಷಕ್ಕಿಂತ ಹಳೆಯದಾಗಿವೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಆ್ಯಂಬುಲೆನ್ಸ್‌ಗಳನ್ನು ಬದಲಿಸಬೇಕೆಂಬ ನಿಯಮವೂ ಪಾಲನೆಯಾಗಿಲ್ಲ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅವ್ಯವಸ್ಥೆಯನ್ನು ಸರಕಾರ ಸರಿಪಡಿಸದಿದ್ದ ಕಾರಣದಿಂದಾಗಿ ಕೋವಿಡ್‌ನಂತಹ ಸೋಂಕಿನಿಂದ ಸಾವುಗಳು ಸಂಭವಿಸುತ್ತವೆ. ಅನೇಕ ಬಡ ಮತ್ತು ಕೆಳ ಮಧ್ಯಮ ವರ್ಗಗಳ ಮನೆಗಳಲ್ಲಿ ಮನೆ ನಡೆಸುವ ದುಡಿಯುವ ಯಜಮಾನನೇ ಕೋವಿಡ್ ಸೋಂಕಿಗೆ ಬಲಿಯಾದ ಸಾವಿರಾರು ಉದಾಹರಣೆಗಳಿವೆ. ಇಂತಹ ಕುಟುಂಬಗಳು ಬೀದಿಗೆ ಬಿದ್ದಿವೆ. ಈ ಕುಟುಂಬಗಳ ಕಣ್ಣೀರು ಒರೆಸಲು ಸರಕಾರದ ಘೋಷಿತ ಪರಿಹಾರ ಧನದ ಮೊತ್ತ ಸಮರ್ಪಕವಾಗಿ ವಿತರಣೆಯಾಗುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News