ಕಾಂಗ್ರೆಸ್-ಜೆಡಿಎಸ್‍ನ 19 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರಮೇಶ್ ಜಾರಕಿಹೊಳಿ

Update: 2022-01-25 14:14 GMT

ಬೆಂಗಳೂರು, ಜ.25: ಕಾಂಗ್ರೆಸ್ ಪಕ್ಷದ 16 ಹಾಗೂ ಜೆಡಿಎಸ್ ಪಕ್ಷದ ಮೂವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ನನ್ನ ಬಾಂಧವ್ಯ ಉತ್ತಮವಾಗಿದೆ. ಆದುದರಿಂದ, ಜೆಡಿಎಸ್ ಪಕ್ಷದ ಶಾಸಕರನ್ನು ನಾವು ಮುಟ್ಟುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಒಪ್ಪಿದರೆ ಕಾಂಗ್ರೆಸ್ ಪಕ್ಷದ 16 ಶಾಸಕರನ್ನು ಬಿಜೆಪಿಗೆ ಕರೆ ತರುತ್ತೇನೆ. ಸಮ್ಮಿಶ್ರ ಸರಕಾರದ ವೇಳೆ ನಾವು ಕಾಂಗ್ರೆಸ್ ಬಿಡುವಾಗ 36 ಜನ ಶಾಸಕರು ನಮ್ಮ ಜೊತೆಯಲ್ಲಿದ್ದರು. ಈ ಪೈಕಿ 17 ಶಾಸಕರು ರಾಜೀನಾಮೆ ನೀಡಿ ಹೊರಗೆ ಬಂದೆವು ಎಂದರು.

ನಮ್ಮ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ. ಅದರಲ್ಲಿ ಇಬ್ಬರು ಬಂದರೆ ಓಕೆ. ಆದರೆ, ಮತ್ತೊಬ್ಬರು ಏನಾದರೂ ಬಂದರೆ ನಾನೇ ಬಿಜೆಪಿ ಬಿಟ್ಟು ಹೊರಗೆ ಹೋಗುತ್ತೇನೆ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರನ್ನು ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿದರು.

ಸಿದ್ದರಾಮಯ್ಯ ವಿರುದ್ಧ ಕಿಡಿ: ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ವಿಧಾನಸಭೆ ಒಳಗೆ ಸಿದ್ದರಾಮಯ್ಯ ನಮ್ಮ ಬಗ್ಗೆ ಏನು ಹೇಳಿಕೆ ನೀಡಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಪಕ್ಷದ್ರೋಹಿಗಳನ್ನು ಯಾವುದೆ ಕಾರಣಕ್ಕೂ ಪುನಃ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಈಗ ಯಾತಕ್ಕಾಗಿ ಬಿಜೆಪಿ ಸೇರಿರುವವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಕಿಡಿಗಾರಿದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News