ಸಚಿವ ಸಂಪುಟದಲ್ಲಿ ಪ್ರತಿ ಜಿಲ್ಲೆ, ಜಾತಿಯವರಿಗೂ ಪ್ರಾತಿನಿಧ್ಯ ನೀಡಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ, ಜ.25: ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದಾರೇ ಪಕ್ಷದಲ್ಲೂ ಬದಲಾವಣೆಯಾಗಬೇಕಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರತಿ ಜಿಲ್ಲೆಗೂ ಹಾಗೂ ಎಲ್ಲ ಜಾತಿಯವರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ಮಂಗಳವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ವಿಜಯಪುರ, ಮೈಸೂರು, ಚಾಮರಾಜನಗರ, ಕೊಡಗು, ಯಾದಗಿರಿ, ಕಲಬುರಗಿ ಸೇರಿ ಹಲವು ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿಲ್ಲ. ಈ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೇ, ಎಲ್ಲ ಜಾತಿಯವರಿಗೂ ಸೂಕ್ತ ಪ್ರಾತಿನಿಧ್ಯ ನೀಡಿ, ಉಳಿದಂತೆ ಪಕ್ಷದ ಹಿರಿಯರಿಗೆ, ಹಿಂಬಾಲಕರಿಗೆ ಅವಕಾಶ ಕೊಡಿ ಎಂದರು.
ಆದಷ್ಟು ಶೀಘ್ರ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಯಾರನ್ನೇ ಸಚಿವರನ್ನಾಗಿ ಮಾಡಿದರೂ ಕನಿಷ್ಠ ಒಂದೂವರೇ ವರ್ಷ ಕಾಲಾವಕಾಶ ನೀಡಿದರೆ ಸಮರ್ಥವಾಗಿ ಕಾರ್ಯನಿರ್ವಹಿಸಲು, ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಅನುಕೂಲವಾಗುತ್ತದೆ. ಚುನಾವಣೆ ಕೇವಲ ಆರು ತಿಂಗಳು ಇದ್ದಾಗ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ಒಂದೊಂದೇ ಜಿಲ್ಲೆಯ ಮೂರ್ನಾಲ್ಕು ಶಾಸಕರನ್ನು ಸಚಿವರನ್ನಾಗಿ ಮಾಡಿದರೆ ಉಳಿದ ಜಿಲ್ಲೆಗಳಿಗೆ ಅನ್ಯಾಯವಾಗಲಿದೆ. ಉಳಿದ ಜಿಲ್ಲೆಯ ಜನರು ಬಿಜೆಪಿಗೆ ಮತ ಹಾಕಿಲ್ಲವೇ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತದೆ ಎಂದರು.
ನಿಗಮ, ಮಂಡಳಿ ಅಧ್ಯಕ್ಷರ ಬದಲಾವಣೆಯೂ ಆಗಬೇಕಿದೆ. ಕೆಜೆಪಿಯಿಂದ ಬಂದ ಬಹುತೇಕ ಮುಖಂಡರೇ ನಿಗಮ, ಮಂಡಳಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಕಟ್ಟಿ ಬೆಳೆಸಿದವರ ನಿರ್ಲಕ್ಷ್ಯ ಆಗಿದೆ. ಅಂಥವರಿಗೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು. ಅಲ್ಲದೆ, ಯುಗಾದಿ ವೇಳೆಗೆ ಹೊಸ ಚೈತನ್ಯದೊಂದಿಗೆ ಬಿಜೆಪಿ ಸಜ್ಜಾಗಬೇಕಿದೆ ಎಂದು ಹೇಳಿದರು.
ಜೆಡಿಎಸ್, ಕಾಂಗ್ರೆಸ್‍ನ ಹಲವು ಶಾಸಕರು ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಸಂಪರ್ಕದಲ್ಲಿ ಇದ್ದಾರೆ. ವಿಜಯಪುರದ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್‍ಗೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದರು.