ಬೆಂಗಳೂರು: ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆ; ವಿಇಎಸ್ ಶಾಲೆಯ ವಿರುದ್ಧ ಶಿಕ್ಷಣ ಆಯುಕ್ತರಿಗೆ ದೂರು
ಬೆಂಗಳೂರು, ಜ.25: ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಕೆಟ್ಟ ಅಭಿಪ್ರಾಯ, ಅಪನಂಬಿಕೆ, ದ್ವೇಷಭಾವನೆ ಮೂಡಿಸಲು ಮುಂದಾದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಇಎಸ್ ಮಾಡೆಲ್ ಕಾನ್ವೆಂಟ್ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ದೂರು ನೀಡಿದೆ.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಸಂವಿಧಾನಕ್ಕೆ ಅಗೌರವ ತೋರುವ ರೀತಿಯಲ್ಲಿ ವಿಷಯವನ್ನು ನೀಡಲಾಗಿದೆ. ‘72 years of Bharathiya Samvidhana/Indian Constitution has reached expiry Date’’(72 ವರ್ಷಗಳ ಭಾರತ ಸಂವಿಧಾನದ ಅವಧಿ ಮುಗಿದಿದೆ) ಎಂಬ ವಿಷಯವನ್ನು ನೀಡಿದ್ದಾರೆ. ಸಂಸ್ಥೆಯ ಮುಖ್ಯಸ್ಥರು ಕೂಡ ಈ ಸಂಬಂಧ ಒಪ್ಪಿಕೊಂಡಿರುವುದಾಗಿ ಸಮಿತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದೆ.
ಈ ಚರ್ಚಾ ಸ್ಪರ್ಧೆಗೆ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿರುವುದು ಮತ್ತು ಮಂಗಳವಾರ(ಜ.25) ಇದೇ ವಿಷಯದ ಮೇಲೆ ಶಾಲೆಯಲ್ಲಿ ಚರ್ಚಾ ಸ್ಪರ್ಧೆಗೆ ತಯಾರಿ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಸಮಿತಿಯು ತನ್ನ ದೂರಿನಲ್ಲಿ ಉಲ್ಲೇಖಿಸಿದೆ.
ಇಲ್ಲಿ ನೀಡಿರುವ ಚರ್ಚಾ ವಿಷಯವು ನೇರವಾಗಿ ನಮ್ಮ ಭಾರತದ ಸಂವಿಧಾನದ ಬಗ್ಗೆ ದ್ವೇಷಭಾವನೆ ಮೂಡಿಸುವ ದುರುದ್ದೇಶ ಹೊಂದಿರುವುದು ನೇರವಾಗಿ ಕಂಡು ಬಂದಿದೆ ಎಂದು ಸಮಿತಿ ಆರೋಪಿಸಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಅವಮಾನಿಸುವುದು ಎಂದರೆ ದೇಶವನ್ನೇ ಅವಮಾನಿಸಿದಂತೆ. ಹೀಗಾಗಿ, ಈ ಶಾಲೆಯನ್ನು ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಬೇಕು. ಇದು ಭಾರತದ ಸಂವಿಧಾನ ವಿರೋಧಿ ಶಾಲೆ ಎಂದು ಘೋಷಿಸಿ, ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಂವಿಧಾನ ವಿರೋಧಿ ಸ್ಪರ್ಧೆಗೆ ಸೂಚಿಸಿರುವ ಮುಖ್ಯೋಪಾಧ್ಯಾಯರು /ಪ್ರಾಂಶುಪಾಲರನ್ನು, ವಿಷಯ ಕೊಟ್ಟ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಬೇಕು. ಮುಂದೆ ಅವರು ಯಾವ ಶಿಕ್ಷಣ ಸಂಸ್ಥೆಗಳಲ್ಲಿಯೂ ಕಾರ್ಯನಿರ್ವಹಿಸಲು ಅನರ್ಹರೆಂದು ಘೋಷಿಸಬೇಕು. ಇವರೊಂದಿಗೆ ಶಾಲೆಯ ಆಡಳಿತ ಮಂಡಳಿಯವರ ಮೇಲೆ ದೇಶದ್ರೋಹದ ಅಡಿಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಬೇಕು. ಈ ಮೂಲಕ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರಕಾರವು ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಲಾಗಿದೆ.
ಮೌಲ್ಯಯುತವಾದ ಸಂವಿಧಾನದ ಕುರಿತು ಅಪನಂಬಿಕೆ ಮೂಡಿಸುವ ಪ್ರಯತ್ನಗಳು ನಡೆದಿದ್ದು, ಈ ಕುರಿತು ಸರಕಾರ ಸೂಕ್ತ ಆದೇಶ ಹೊರಡಿಸಿ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಕಾಲೇಜುಗಳ ಮುಖ್ಯಸ್ಥರುಗಳಿಗೆ ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
‘ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದ್ವೇಷಭಾವನೆ ಮೂಡಿಸಲು ಮುಂದಾದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಇಎಸ್ ಮಾಡೆಲ್ ಕಾನ್ವೆಂಟ್ ಶಾಲೆಯ ಆಡಳಿತ ಮಂಡಳಿಯ ಮೇಲೆ ಸೆಕ್ಷನ್ ಐಪಿಸಿ 121, 124ಎ, 153ಎ ಮುಂದಾತ ಆರೋಪದ ಮೇಲೆ ಬಂಧಿಸಲು ಕೋರಿ ರಾಮನಗರ ಎಸ್‍ಪಿ ಅವರಿಗೆ ದೂರು ಸಲ್ಲಿಸಿದ್ದೇವೆ.’
-ಬಿ.ಆರ್.ಭಾಸ್ಕರ್ ಪ್ರಸಾದ್, ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ಮುಖಂಡ