ತುಮಕೂರು ಮಹೀಂದ್ರಾ ಶೋರೂಂನಲ್ಲಿ ರೈತನಿಗೆ ಅಪಮಾನವಾದ ಘಟನೆಯ ಕುರಿತು ಬಹಿರಂಗ ಹೇಳಿಕೆ ನೀಡಿದ ಆನಂದ್‌ ಮಹೀಂದ್ರಾ

Update: 2022-01-25 16:59 GMT
 ಆನಂದ್‌ ಮಹೀಂದ್ರಾ                                    ರೈತ ಕೆಂಪೇಗೌಡ

ಹೊಸದಿಲ್ಲಿ, ಜ.25: ರಾಜ್ಯದ ಮಹಿಂದ್ರಾ ಶೋರೂಂ ಒಂದರಲ್ಲಿ ವಾಹನ ಖರೀದಿಸಲು ಬಂದ ರೈತನೊಬ್ಬನಿಗೆ ಅಪಮಾನವಾದ ಘಟನೆಯ ಬಗ್ಗೆ ಮಂಗಳವಾರ ಸಂಸ್ಥೆಯ ವರಿಷ್ಠ, ಉದ್ಯಮಿ ಆನಂದಾ ಮಹೀಂದ್ರಾ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ವ್ಯಕ್ತಿ ಘನತೆಯನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ.

ನಮ್ಮ ಎಲ್ಲಾ ಸಮುದಾಯಗಳು ಹಾಗೂ ಪಾಲುದಾರರು ಬೆಳೆಯಬೇಕೆಂಬುದೇ ಮಹಿಂದ್ರಾ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದೇ ಮಹೀಂದ್ರಾದ ಪ್ರಧಾನ ವೌಲ್ಯವಾಗಿದೆ. ಈ ತತ್ವಕ್ಕೆ ಯಾವುದೇ ಲೋಪವುಂಟಾದಲ್ಲಿ ಅದನ್ನು ತುರ್ತಾಗಿ ಬಗೆಹರಿಸಲಾಗುವುದು ಎಂದು ಆನಂದ್ ಮಹೀಂದ್ರಾ ಅವರು ಸಂಸ್ಥೆಯ ಸಿಇಓ ವಿಜಯ್ ನಕ್ರಾ ಅವರನ್ನು ಟ್ವೀಟನ್ನು ಉಲ್ಲೇಖಿಸಿ ಮರು ಟ್ವೀಟ್ ಮಾಡಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿಯ ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ನಕ್ರಾ ಭರವಸೆ ನೀಡಿದ್ದಾರೆಸಂಸ್ಥೆಯ ಮುಂಚೂಣಿ ಸಿಬ್ಬಂದಿಗೆ ಸಲಹೆ ಹಾಗೂ ಸೂಕ್ತ ತರಬೇತಿ ಕೂಡಾ ನೀಡಲಾಗುವುದೆಂದು ತಿಳಿಸಿದ್ದಾರೆ.

ತುಮಕೂರಿನ ಶೋ ರೂಂನಲ್ಲಿ ವಾಹನ ಖರೀದಿಸಲು ಬಂದಿದ್ದ ರೈತ ಕೆಂಪೇಗೌಡ ಶೋರೂಂನ ಸೇಲ್ ಮ್ಯಾನ್ ನಲ್ಲಿ ಎಸ್ಯುವಿ ಕಾರಿನ ಬೆಲೆಯನ್ನು ವಿಚಾರಿಸಿದ್ದನು. ಅವರ ವೇಷಭೂಷಣ ಗಮನಿಸಿದ ಸಿಬ್ಬಂದಿ ನಿನಗೆ ಹತ್ತು ಲಕ್ಷ ರೂ. ಮೌಲ್ಯದ ಆ ವಾಹನ ಕೊಳ್ಳಲು ಸಾಧ್ಯವಿಲ್ಲವೆಂದು ನಿಂದಿಸಿದ್ದನು. ಪ್ರಾಯಶಃ ನಿನ್ನ ಜೇಬಿನಲ್ಲಿ ಹತ್ತು ರೂಪಾಯಿ ಕೂಡಾ ಇರಲಾರದು. ತಕ್ಷಣವೇ ಜಾಗ ಖಾಲಿ ಮಾಡು ಎಂದು ಆತ ಹೀಯಾಳಿಸಿದ್ದ. ಇದನ್ನು ಸವಾಲಾಗಿ ಸ್ವೀಕರಿಸಿದ ರೈತ, ಒಂದು ತಾಸಿನೊಳಗೆ ಹತ್ತು ಲಕ್ಷ ರೂ.ನಗದು ಹಣವನ್ನು ತಂದು ವಾಹನವನ್ನು ಕೊಡುವಂತೆ ಕೇಳಿದ್ದನು. ಇದರಿಂದ ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದರು. ವಾಹನಕ್ಕಾಗಿ ಬುಕ್ಕಿಂಗ್ ಮಾಡಿದವರು ಹಲವರು ಇದ್ದರಿಂದ ಸಿಬ್ಬಂದಿಗೆ ತಕ್ಷಣವೇ ರೈತ ಕೆಂಪೇಗೌಡನಿಗೆ ವಾಹನವನ್ನು ತಕ್ಷಣವೇ ಪೂರೈಕೆ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೂ ಶೋರೂಂನ ಮಾರಾಟ ನಿರ್ವಹಣಾಧಿಕಾರಿ ಕೆಂಪೇಗೌಡ ಅವರ ಕ್ಷಮೆಯಾಚಿಸಿದ್ದರು.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಹಾಗೂ ಆನಂದ್ ಮಹೀಂದ್ರಾ ಅವರ ಗಮನಕ್ಕೂ ತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News