ಚಿಕ್ಕಮಗಳೂರು: ಸಿ.ಟಿ.ರವಿ ಬೆಂಬಲಿಗರಿಂದ ಕಾಂಗ್ರೆಸ್ ನಗರಸಭೆ ಸದಸ್ಯ, ಪುತ್ರನ ಮೇಲೆ ಹಲ್ಲೆ; ಆರೋಪ

Update: 2022-01-25 17:10 GMT

ಚಿಕ್ಕಮಗಳೂರು, ಜ.25: ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ಸಿ.ಪಿ.ಲಕ್ಷ್ಮಣ್ ಹಾಗೂ ಅವರ ಪುತ್ರ ಆರ್.ಎಲ್.ನಟರಾಜ್ ಮೇಲೆ ಬಿಜೆಪಿ ಬೆಂಬಲಿಗರು ಶಾಸಕ ಸಿ.ಟಿ.ರವಿ ಕುಮ್ಮಕ್ಕಿನಿಂದಾಗಿ ಸೋಮವಾರ ಹಲ್ಲೆ ನಡೆಸಿದ್ದಾರೆ. ಈ ಘಟನೆ ಖಂಡನೀಯ. ಇಂತಹ ಘಟನೆ ಮತ್ತೆ ಮರುಕಳಿಸಿದರೇ ಶಾಸಕರ ಮನೆ ಮುಂದೆ ಕಾಂಗ್ರೆಸ್ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಎಚ್ಚರಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 25ನೇ ವಾರ್ಡಿನ ಸದಸ್ಯ ಸಿ.ಪಿ.ಲಕ್ಷ್ಮಣ್ ಸೋಮವಾರ ತಮ್ಮ ವಾರ್ಡಿನ ವಿಜಯಪುರ ಮುಖ್ಯರಸ್ತೆಯ ಗೃಹ ನಿರ್ಮಾಣ ಸಹಕಾರಿ ಸಂಘದ ಎದುರಿನಲ್ಲಿ ಹಾನಿಗೊಂಡಿದ್ದ ಕುಡಿಯುವ ನೀರಿನ ಪೈಪ್‍ಅನ್ನು ತುರ್ತು ದುರಸ್ತಿಗೊಳಿಸುತ್ತಿದ್ದ ಸಂದರ್ಭದಲ್ಲಿ ಅದೇ ವಾರ್ಡಿನ ಧನಂಜಯಗೌಡ ಎಂಬವರು ದುರಸ್ತಿ ಕಾರ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ್ದಾರೆ. ದುರಸ್ತಿ ನಡೆಸುತ್ತಿದ್ದ ಸಂದರ್ಭದಲ್ಲಿ ಧನಂಜಯಗೌಡ ಮತ್ತು ಅವರ ಬೆಂಬಲಿಗರಾದ ಶ್ಯಾಮ್, ಜೀವನ್ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ. ಈ ಸಂದರ್ಭದಲ್ಲಿ ಸಿ.ಪಿ.ಲಕ್ಷ್ಮಣ್ ಅವರ ಮಗ ಆರ್.ಎಲ್.ನಟರಾಜ್ ಸ್ಥಳಕ್ಕೆ ಬಂದಿದ್ದು, ಆಗ ಸಿ.ಪಿ.ಲಕ್ಷ್ಮಣ್ ಮತ್ತು ಆರ್.ಎಲ್.ನಟರಾಜ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯನ ಮೇಲೆ ಹಲ್ಲೆ ನಡೆಸಿರುವುದನ್ನು ಪಕ್ಷ ಖಂಡಿಸುತ್ತದೆ. ಇದರ ಹಿಂದೆ ಶಾಸಕ ಸಿ.ಟಿ.ರವಿ ಅವರು ಪರೋಕ್ಷ ಬೆಂಬಲ ಇರುವ ಬಗ್ಗೆ ಅನುಮಾನವಿದೆ. ಇಂತಹ ಘಟನೆಗಳು ಮರುಕಳಿಸದಂತೆ ಶಾಸಕ ಸಿ.ಟಿ.ರವಿ ಎಚ್ಚರ ವಹಿಸಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸಿದರೇ ಶಾಸಕರ ಮನೆ ಮುಂದೇ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಮ್ಮ ವಾರ್ಡಿನ ಜನರ ಪರವಾಗಿ ಕೆಲಸ ಮಾಡಲು ಮುಂದಾದ ಸದಸ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ನಾಗರಿಕರು ತಲೆ ತಗ್ಗಿಸುವ ವಿಚಾರ. ಚುನಾಯಿತ ಪ್ರತಿನಿಧಿ ಜನಪರ ಕೆಲಸ ಮಾಡುವುದು ಸಂವಿಧಾನ ನೀಡಿರುವ ಹಕ್ಕು. ಆ ಹಕ್ಕಿಗೆ ಚ್ಯುತಿಯಾಗಿದೆ. ಈ ಘಟನೆಯನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಗರಸಭೆ ಸದಸ್ಯ ಸಿ.ಪಿ.ಲಕ್ಷ್ಮಣ್ ಮಾತನಾಡಿ, ವಾರ್ಡಿನಲ್ಲಿ 2-3ದಿನಗಳಿಂದ ಕುಡಿಯುವ ನೀರು ಬಂದಿರಲಿಲ್ಲ, ಜನರು ದೂರವಾಣಿ ಕರೆ ಮಾಡಿ ನೀರು ಬಾರದಿರುವುದನ್ನು ನನ್ನ ಗಮನಕ್ಕೆ ತಂದಿದ್ದರು. ಕುಡಿಯುವ ನೀರಿನ ಸಮಸ್ಯೆ ಇದ್ದಿದ್ದರಿಂದ ತುರ್ತು ದುರಸ್ತಿ ಮಾಡಲೇಬೇಕಿತ್ತು. ದುರಸ್ತಿಗೆ ಮುಂದಾದಾಗ ಧನಂಜಯ್, ಜೀವನ್, ಶ್ಯಾಮ್ ಅಡ್ಡಿಪಡಿಸಿ, ಹಲ್ಲೆ ಮಾಡಿದ್ದಾರೆ ಎಂದು ದೂರಿದ ಅವರು, ವರ್ಕ್ ಆರ್ಡರ್ ತೋರಿಸಿ, ನಾವು ಇಲ್ಲಿ ಅಗೆಯಲು ಬಿಡುವುದಿಲ್ಲ ಎಂದು ದುರಸ್ತಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ನಾವು ರಸ್ತೆ ಅಗೆಯುತ್ತಿರಲಿಲ್ಲ, ರಸ್ತೆ ಬದಿಯಲ್ಲಿ ಪೈಪ್ ರಿಪೇರಿ ಇದ್ದ ಕಾರಣ ರಸ್ತೆ ಬದಿಯಲ್ಲಿ ಮಣ್ಣು ಅಗೆಯಯುತ್ತಿದ್ದ ವೇಳೆ ಕೆಲಸಕ್ಕೆ ಅಡ್ಡಿಪಡಿಸಿ ನನ್ನ ಮತ್ತು ಮಗನ ಮೇಲೆ ಹಲ್ಲೆ ಮಾಡಿದರು ಎಂದು ಘಟನೆಯನ್ನು ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಎನ್.ಮಹೇಶ್, ಹಿರೇಮಗಳೂರು ಪುಟ್ಟಸ್ವಾಮಿ, ಎಚ್.ಪಿ.ಮಂಜೇಗೌಡ, ಕಾರ್ತಿಕ್ ಚಟ್ಟಿಯಾರ್, ಬಿ.ಎಚ್.ಹರೀಶ್, ಜಯರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News