ಮೈಸೂರಿನ ಕೆಎಸ್ಸಾರ್ಟಿಸಿ ಘಟಕವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಜೆಪಿ ಯತ್ನ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪ

Update: 2022-01-25 17:16 GMT

ಮೈಸೂರು,ಜ.25: ಮೈಸೂರು ನಗರದ ಬನ್ನಿಮಂಟಪದಲ್ಲಿರುವ ಸಾರಿಗೆ ಘಟಕವನ್ನು ಮುಚ್ಚಿ ಖಾಸಗೀ ಅವರಿಗೆ ಮಾರಾಟ ಮಾಡಿ ಕಿಕ್ ಬ್ಯಾಕ್ ಪಡೆಯುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಲಸಗಾರರ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕ ಬಂದಾಗಿನಿಂದ ಎಲ್ಲಾ ಸರ್ಕಾರಿ ವಲಯಗಳನ್ನು ಖಾಸಗೀಕರಣಗೊಳಿಸಿ ಬಂಡವಾಳ ಶಾಹಿಗಳ ಹಿಡಿತಕ್ಕೆ ವಹಿಸುತ್ತಿದೆ. ಅದರಂತೆ ಮೈಸೂರು ನಗರದ ಬನ್ನಿಮಂಟಪದಲ್ಲಿರುವ ಕೆಎಸ್‍ಆರ್‍ಟಿಸಿ ಘಟಕದ ಸುಮಾರು 20 ಎಕರೆ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಕೊರೋನ ನೆಪ ಮಾಡಿಕೊಂಡು ಮೈಸೂರು ನಗರದಲ್ಲಿ ನಗರ ಸಾರಿಗೆ ಮತ್ತು ಗ್ರಾಮಾಂತರ ಸಾರಿಗೆ ಘಟಕಗಳನ್ನು ಒಂದೇ ವಿಭಾಗವನ್ನಾಗಿ ಮಾಡಲು ಹೊರಟಿದೆ. ಒಂದೇ ವಿಭಾಗ ಮಾಡಿದರೆ ನಮ್ಮ ವಿರೋಧ ಇಲ್ಲ. ಆದರೆ ಈ ಘಟಕಗಳ 20 ಎಕರೆ ಜಾಗವನ್ನು ಖಾಸಗಿ ಯವರಿಗೆ ವಹಿಸಲು ತೀರ್ಮಾನ ಮಾಡಿರುವುದಕ್ಕೆ ನಮ್ಮ ವಿರೋಧ ಇದೆ. ಬೇಕಿದ್ದರೆ ಇವರೇ ವಾಣಿಜ್ಯಕರಣಗೊಳಿಸಲಿ ಎಂದು ಹೇಳಿದರು.

ಕೂಡಲೇ ಖಾಸಗಿಯವರಿಗೆ ಮಾರಾಟ ಮಾಡುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ. ಸಾರಿಗೆ ಸಂಸ್ಥೆ ಕೆಲಸಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳೊಡಗೂಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಮಲ್ಲಯ್ಯ, ಪಾರ್ಥಸಾರತಿ, ರಾಮಪ್ಪ, ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News