ಫೆಬ್ರವರಿಯಲ್ಲಿ ಕೋವಿಡ್ ಮೂರನೇ ಅಲೆ ಕಡಿಮೆಯಾಗಲಿದೆ: ಸಚಿವ ಡಾ.ಕೆ.ಸುಧಾಕರ್

Update: 2022-01-25 18:05 GMT
ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಜ.25: ಫೆಬ್ರವರಿ ಎರಡು ಅಥವಾ ಮೂರನೇ ವಾರದಲ್ಲಿ ಕೋವಿಡ್ ಮೂರನೇ ಅಲೆ ಕಡಿಮೆಯಾಗಲಿದೆ ಎಂದು ಐಸಿಎಂಆರ್ ಹೇಳಿದೆ. ಹೆಚ್ಚು ಎಚ್ಚರ ವಹಿಸಿದರೆ ಮೂರನೇ ಅಲೆ ನಿಯಂತ್ರಣಕ್ಕೆ ತರಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ಶೇ.100 ಹಾಗೂ ಎರಡನೇ ಡೋಸ್ ಲಸಿಕೆ ನೀಡುವುದರಲ್ಲಿ ಶೇ.84ರಷ್ಟು ಪ್ರಗತಿ ಸಾಧಿಸಲಾಗಿದೆ. ಆದುದರಿಂದ, ಜನರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಬೆಳೆದಿದೆ ಎಂದರು.

ಆಸ್ಪತ್ರೆ ದಾಖಲಾತಿ ಕಡಿಮೆ: ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಳೆದ ವಾರ ಶೇ.22ರಷ್ಟು ಇದ್ದು, ಈ ವಾರ ಶೇ.32ರಷ್ಟು ಆಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ 3,442, ಖಾಸಗಿ ಆಸ್ಪತ್ರೆಗಳಲ್ಲಿ 1,788 ಸೇರಿ ಒಟ್ಟು 5,230 ರೋಗಿಗಳು ದಾಖಲಾಗಿದ್ದಾರೆ ಎಂದು ಅವರು ಹೇಳಿದರು.

3.62 ಲಕ್ಷ ಸಕ್ರಿಯ ಪ್ರಕರಣಗಳಲ್ಲಿ ಶೇ.2ಕ್ಕಿಂತ ಕಡಿಮೆ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದುದರಿಂದ, ಈ ರೋಗ ತೀವ್ರವಾಗಿ ಪರಿಣಾಮ ಬೀರಿಲ್ಲ. ಐದಾರು ದಿನಗಳೊಳಗೆ ಲಕ್ಷಣಗಳು ಕಡಿಮೆಯಾಗುತ್ತವೆ. ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಆದರೂ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸುಧಾಕರ್ ತಿಳಿಸಿದರು.

ವಿಷನ್ ವರದಿ: ಆರೋಗ್ಯ ಇಲಾಖೆಯಿಂದ ವಿಷನ್ ವರದಿ ರೂಪಿಸಲಾಗುತ್ತಿದೆ. ಮುಂದಿನ 20 ವರ್ಷಗಳಲ್ಲಿ ಕರ್ನಾಟಕ ಹೇಗೆ ಸ್ವಾಸ್ಥ್ಯ ರಾಜ್ಯವಾಗಬೇಕು ಹಾಗೂ ಮೂರು ಹಂತಗಳ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಹೇಗಾಗಬೇಕೆಂದು ವರದಿ ರೂಪಿಸಲಾಗುತ್ತಿದೆ. ವರದಿ ರೂಪಿಸುವ ಸಮಿತಿಯಲ್ಲಿ 30 ಹಿರಿಯ ತಜ್ಞರಿದ್ದಾರೆ ಎಂದು ಅವರು ಹೇಳಿದರು.

ಕಳೆದೊಂದು ವರ್ಷದಲ್ಲಿ ಸುಮಾರು 750 ತಜ್ಞರು ಇದನ್ನು ರೂಪಿಸಲು ಭಾಗಿಯಾಗಿದ್ದಾರೆ. ಜ.28ಕ್ಕೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆರು ತಿಂಗಳಾಗುತ್ತದೆ. ಆ ವೇಳೆ ಅವರು ವರದಿ ಬಿಡುಗಡೆ ಮಾಡಲಿದ್ದಾರೆ ಎಂದು ಸುಧಾಕರ್ ತಿಳಿಸಿದರು.

ಕೇಂದ್ರ ಬಜೆಟ್‍ನ ಬಗ್ಗೆ ಜನರಿಗೆ ದೊಡ್ಡ ನಿರೀಕ್ಷೆ ಇದೆ. ದೇಶದ ಆರ್ಥಿಕತೆಯನ್ನು ಕೋವಿಡ್ ಪೂರ್ವ ಹಾಗೂ ಕೋವಿಡ್ ನಂತರದ ಕಾಲ ಎಂದು ವಿಂಗಡಿಸಬಹುದು. ಕೋವಿಡ್ ನಂತರದ ಈ ಕಾಲದಲ್ಲಿ ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಉತ್ತಮ ಬಜೆಟ್ ನೀಡುವ ವಿಶ್ವಾಸವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News