ವಿಷಕಾರಿ ಹಾವು ಕಡಿತ: ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಸಿಗದೆ ಮಹಿಳೆ ಸಾವು; ಆರೋಪ

Update: 2022-01-26 11:10 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಜ.26: ಹಾವು ಕಡಿತಕ್ಕೊಳಗಾಗಿದ್ದ ಮಹಿಳೆಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚುಚ್ಚುಮದ್ದು ಸಿಗದೇ ಮಹಿಳೆ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ.

ಗೋಣಿಬೀಡು ಸಮೀಪದ ಸಾಲುಮರದಹಳ್ಳಿ ನಿವಾಸಿ ಶಾರದಮ್ಮ ಮೃತ ಮಹಿಳೆಯಾಗಿದ್ದು, ಮಂಗಳವಾರ ರಾತ್ರಿ ಶಾರದಮ್ಮ ತಮ್ಮ ಮನೆಯ ಹಿತ್ತಲಿಗೆ ತೆರಳಿದ್ದ ವೇಳೆ ವಿಷಕಾರಿ ಹಾವೊಂದು ಕಡಿದಿದ್ದು, ಕೂಡಲೇ ಅವರನ್ನು ಕುಟುಂಬಸ್ಥರು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ನೀಡುವ ಚುಚ್ಚುಮದ್ದು ಇಲ್ಲದ ಪರಿಣಾಮ ಅವರನ್ನು ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿದೆ. 

ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲೂ ಚುಚ್ಚುಮದ್ದು ಸಿಗದ ಪರಿಣಾಮ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲೂ ಸಕಾಲದಲ್ಲಿ ಚುಚ್ಚುಮದ್ದ ಸಿಗದೇ ಮಹಿಳೆ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಹಿಳೆಯನ್ನು ಕುಟುಂಬಸ್ಥರು ಸರಕಾರಿ ಆಸ್ಪತ್ರೆಯಲ್ಲದೇ ಮೂರು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದರೂ ಚುಚ್ಚುಮದ್ದು ಸಿಕ್ಕಿಲ್ಲ ಎನ್ನಲಾಗಿದ್ದು, ಸುಮಾರು 3 ಗಂಟೆಗಳ ಕಾಲ ವಿಷಕಾರಿ ಹಾವು ಕಡಿತದಿಂದ ನರಳಿದ ಶಾರದಮ್ಮ ಚುಚ್ಚುಮದ್ದು ಸಿಗದೇ ಅಸನೀಗಿದ್ದಾರೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರ ಆಕ್ರೋಶ: ಹಾವು ಕಡಿತಕ್ಕೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಕಾಯ್ದಿರಿಸಬೇಕಾಗಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಜವಬ್ದಾರಿಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ಇಲ್ಲದಿರುವ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯನ್ನು ವೈದ್ಯಕೀಯ ಕಾಲೇಜನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಶಾಸಕ ಸಿ.ಟಿ.ರವಿ ಹೇಳುತ್ತಿದ್ದರೂ ಇಂತಹ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ಇಲ್ಲದಿರುವುದು ಶಾಸಕರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News