ಅಂಬೇಡ್ಕರ್ ಫೋಟೊ ತೆರವುಗೊಳಿಸಿದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆಂದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ!

Update: 2022-01-26 13:34 GMT

ರಾಯಚೂರು, ಜ. 26: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ರಾಯಚೂರಿನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆದರೆ ಮಾತ್ರವೇ ಧ್ವಜಾರೋಹಣ ನೆರವೇರಿಸುತ್ತೇನೆಂದು ಪಟ್ಟು ಹಿಡಿದು ಅಂಬೇಡ್ಕರ್ ಫೋಟೋ ತೆಗೆಸಿ ಉದ್ಧಟತನ ಮೆರೆದಿದ್ದು, ಇದಕ್ಕೆ ವಕೀಲರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.

ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಒಟ್ಟಿಗೆ ಇಟ್ಟು ಹೂ ಮಾಲೆ ಹಾಕಿ, ಪೂಜೆ ಮಾಡಿ ಪುಷ್ಪಾರ್ಚನೆ ಮತ್ತು ಧ್ವಜಾರೋಹಣಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಇಡಬೇಕೆಂದು ಯಾವುದೇ ಸೂಚನೆ, ಆದೇಶವಿಲ್ಲ. ಹೀಗಾಗಿ ಅಂಬೇಡ್ಕರ್ ಫೋಟೋ ತೆಗೆಯಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ ಕಾರ್ಯಕ್ರಮ ಆಯೋಜಕರು ಅಂಬೇಡ್ಕರ್ ಫೋಟೋ ತೆಗೆಯಲು ಮುಂದಾದರು.

ಇದಕ್ಕೆ ಆಕ್ಷೇಪಿಸಿದ ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಕೀಲರು ಪ್ರತಿಭಟನೆ ನಡೆಸಿದ್ದು, ಧ್ವಜಾರೋಹಣ ಕಾರ್ಯಕ್ರಮವನ್ನು ವಿರೋಧಿಸಿ ಹೊರನಡೆದಿದ್ದು, ನ್ಯಾಯಾಧೀಶರು ಮತ್ತು ವಕೀಲರು ಕೆಲ ಕಾಲ ಜಟಾಪಟಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಿಗೆ ವೈರಲ್ ಆಗಿದೆ. ಗಣರಾಜ್ಯೋತ್ಸವದಂದು ಡಾ.ಬಿ.ಆರ್.ಅಂಬೇಡ್ಕರ್ ಫೆÇೀಟೋವನ್ನು ಇಡಬೇಕೆಂಬ ಚರ್ಚೆಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ.

ಈ ಸಂಬಂಧ ರಾಜ್ಯ ಸರಕಾರ 2020ರಲ್ಲಿ ಗಣರಾಜೋತ್ಸವ ಸಮಾರಂಭಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ಇಡಬೇಕೆಂದು ಸುತ್ತೋಲೆ ಹೊರಡಿಸಿತ್ತು. ಹೀಗಾಗಿ ಈ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಫೋಟೋ ಇಟ್ಟು ಗೌರವಿಸಲಾಗುತ್ತಿದೆ. ಸಂವಿಧಾನ ರಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಡಾ.ಅಂಬೇಡ್ಕರ್ ಅವರ ಫೋಟೋ ಇಡುವ ಬಗ್ಗೆಯೇ ಇದೀಗ ನ್ಯಾಯಾಧೀಶರೊಬ್ಬರು ಆಕ್ಷೇಪಿಸಿ ಉದ್ಧಟತನ ತೋರಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ತೆಗೆಯಬೇಕೆಂದು ಒತ್ತಾಯಿಸಿದಾಗ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಇಡಬೇಕೆಂದು ನಮಗೆ ಯಾವುದೇ ಆದೇಶ ಬಂದಿಲ್ಲ. ಅಂಬೇಡ್ಕರ್ ಫೋಟೋ ಇದ್ದರೆ ನಾನು ಧ್ವಜಾರೋಹಣ ಮಾಡುವುದಿಲ್ಲ' ಎಂದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಗೆ ಅಗೌರವ ತೋರಿರುವುದನ್ನು ಸ್ಥಳದಲ್ಲೆ ವಕೀಲರು ವಿರೋಧಿಸಿದ್ದಾರೆ.


ಸಹಿಸಲು ಸಾಧ್ಯವಿಲ್ಲ

`ಎಲ್ಲ ಕಡೆಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಆದರೆ, ರಾಯಚೂರಿನಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಆದೇಶವಿಲ್ಲ ಎಂಬ ನೆಪದಲ್ಲಿ ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದ್ದು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರಿಗೆ ಅಗೌರವ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಅವರ ಭಾವಚಿತ್ರ ಇರಿಸುವ ಸಂಬಂಧ ಆದೇಶ ಮಾಡಿಸಲು ಶ್ರಮಿಸಲಾಗುವುದು'

-ಮಾರಪ್ಪ ವಕೀಲರು ರಾಯಚೂರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News