ನ್ಯಾಯಬೆಲೆ ಅಂಗಡಿಯಲ್ಲಿ ಉಪ್ಪಿನಕಾಯಿ ಮಾರಾಟ ಮಾಡಲು ಸಾಧ್ಯವಿಲ್ಲ: ಸಚಿವ ಉಮೇಶ್ ಕತ್ತಿ

Update: 2022-01-26 13:31 GMT

ವಿಜಯಪುರ, ಜ. 26: `ನ್ಯಾಯಬೆಲೆ ಅಂಗಡಿಗಳಲ್ಲಿ ನಿಂಬೆ ಹಣ್ಣಿನ ಉತ್ಪನ್ನದ ಉಪ್ಪಿನಕಾಯಿ ಮಾರಾಟ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಬೇಕಾದರೆ ಶಾಲೆ, ಅಂಗನವಾಡಿ ಕೇಂದ್ರದಲ್ಲಿ ಆ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಶಾಲೆಯಲ್ಲಿ ಉಪ್ಪಿನಕಾಯಿ ನೀಡುವ ಕುರಿತು ಶಿಕ್ಷಣ ಇಲಾಖೆ ಜತೆ ಚರ್ಚೆ ನಡೆಸಲಾಗುವುದು. ಪಡಿತರ ಧಾನ್ಯ ವಿತರಣೆಯಲ್ಲಿ ಸದ್ಯ ಜೋಳ, ರಾಗಿ, ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು, ಇದರ ಜತೆ ಉಪ್ಪಿನಕಾಯಿ ನೀಡಲು ಸಾಧ್ಯವಿಲ್ಲ. ನಿಂಬೆ ಅಭಿವೃದ್ಧಿ ಮಂಡಳಿಯ ಬೇಡಿಕೆ ತಮ್ಮ ಬಳಿ ತಲುಪಿದೆ. ನಿಂಬೆ ಯಾವ ರೀತಿ ರಫ್ತು ಮಾಡಬಹುದು ಎನ್ನುವ ಕುರಿತು ಸರಕಾರ ಚರ್ಚೆ ನಡೆಸಲಿದೆ' ಎಂದರು.

`ರಾಜ್ಯದಲ್ಲಿ ಪಡಿತರ ವಿತರಣೆ ಯೋಜನೆಯಡಿ ಆರುವರೆ ಲಕ್ಷ ಟನ್ ಜೋಳ, ಆರುವರೆ ಲಕ್ಷ ಟನ್ ರಾಗಿ ಅಗತ್ಯವಿದ್ದು, ಸದ್ಯ ರಾಗಿ ಎರಡು ಲಕ್ಷ ಟನ್ ಅಷ್ಟೇ ದಾಸ್ತಾನು ಮಾಡಲಾಗಿದೆ. ಜೋಳ 70 ಸಾವಿರ ಟನ್ ಸಂಗ್ರಹವಾಗಿದೆ. ಬೇಕಾದಷ್ಟು ರಾಗಿ, ಜೋಳ ಸಂಗ್ರಹಣೆಯಾಗದಿರುವ ಕಾರಣ ಹಂಚಿಕೆ ಮಾಡಲು ಕಷ್ಟವಾಗಿದೆ. ಹೀಗಾಗಿ ಅಕ್ಕಿಯನ್ನ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿದೆ' ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರಕ್ಕೂ ಸ್ಥಳೀಯವಾಗಿ ಬೆಂಬಲ ಬೆಲೆ(ಎಂಎಸ್‍ಪಿ) ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಪಡಿತರದಾರರಿಗೆ ಐದು ಕೆಜಿ ಅಕ್ಕಿ, ಒಂದು ಕೆಜಿ ರಾಗಿ, ಒಂದು ಕೆಜಿ ಜೋಳ ವಿತರಣೆ ಮಾಡಲಾಗುತ್ತಿದೆ. ರೈತರು ಮತ್ತು ಪಡಿತರ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ಉಮೇಶ್ ಕತ್ತಿ ತಿಳಿಸಿದರು.

ಬ್ರದರ್ಸ್ ಇಲ್ಲ, ಎಲ್ಲ ಬಿಜೆಪಿ: `ನಮ್ಮಲ್ಲಿ ಯಾವುದೇ ಗುಪ್ತ ಸಭೆ, ಬಹಿರಂಗ ಸಭೆಯಾಗಲಿ ನಡೆದಿಲ್ಲ. ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯ ಮಹಾಂತೇಶ್ ಕವಟಗಿಮಠ ಸೋಲಿನ ಬಗ್ಗೆ ಸಮಾಲೋಚನೆ ನಡೆಸಿದ್ದು, ಮುಂಬರಲಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ಹೇಗೇ ಎದುರಿಸಬೇಕು. ಜೊತೆಗೆ ಪಕ್ಷವನ್ನು ಗೆಲ್ಲಿಸುವ ಸಂಬಂಧ ಮುಖಂಡರೆಲ್ಲರೂ ಸೇರಿ ಚರ್ಚೆ ಮಾಡಿದ್ದೇವೆ' ಎಂದು ಕತ್ತಿ ಸ್ಪಷ್ಟಪಡಿಸಿದರು.

`ನಮ್ಮ ಪಕ್ಷದಲ್ಲಿ ಬ್ರದರ್ಸ್ ಯಾರು ಇಲ್ಲ, ಎಲ್ಲರೂ ಬಿಜೆಪಿ ಶಾಸಕರೇ. ನನಗೂ ಒಬ್ಬ ತಮ್ಮ, ಅಣ್ಣ ಇದ್ದಾರೆ. ಇವರೆಲ್ಲ ಮನೆಯಲ್ಲಿ ಇರಬಹುದು. ಆದರೆ, ಬಿಜೆಪಿ ನಮ್ಮ ಮಾತೃ ಪಕ್ಷ, ಅದನ್ನು ಎಲ್ಲರೂ ಸೇರಿ ಬೆಳೆಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು' ಎಂದು ಉಮೇಶ್ ಕತ್ತಿ, ಜಾರಕಿಹೊಳಿ ಸಹೋದರರ ವಿರುದ್ಧ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದರು.

ಉಸ್ತುವಾರಿ ಸಿಕ್ಕಿದ್ದು ಸಂತಸ ತಂದಿದೆ: `ನನಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಹಳಷ್ಟು ಸಂತೋಷದಿಂದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ಹಿಂದೆ ಸಕ್ಕರೆ ಸಚಿವನಾದಾಗಲೂ ನಾನು ವಿಜಯಪುರ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನಿಭಾಯಿಸಿದ್ದೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಯತ್ನಾಳ್ ಸಚಿವರಾಗೋದು ಪಕ್ಕಾ

ಸಂಪುಟ ಬದಲಾವಣೆ ನಿರಂತರ ಜ್ಯೋತಿ ಇದ್ದಂತೆ. ಬದಲಾವಣೆ ಕಂಡು ಬರುತ್ತಿಲ್ಲ. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಸಚಿವರಾಗೋದು ಪಕ್ಕಾ. ಉಸ್ತುವಾರಿ ಬದಲಾವಣೆಯಿಂದ ನಮಗೆ ಯಾವುದೇ ಅಸಮಾಧಾನ ಇಲ್ಲ, ಅಸಮಾಧಾನ ಅನ್ನೋದು ಮಾಧ್ಯಮ ಸೃಷ್ಟಿ ಅಷ್ಟೇ'

-ಉಮೇಶ್ ಕತ್ತಿ ವಿಜಯಪುರ ಜಿಲ್ಲಾ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News